ಉದಯವಾಹಿನಿ, ಸಾಗರ್,ಮಧ್ಯಪ್ರದೇಶ: ಇಲ್ಲಿನ ಕೆಸ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನಕಲಕುವ ಘಟನೆಯೊಂದು ಬೆಳಕಿಗೆ ಬಂದಿದೆ. ಗುರುವಾರ ತಾಯಿಯೊಬ್ಬರು, ತನ್ನ ನಾಲ್ವರು ಮುಗ್ಧ ಹೆಣ್ಣುಮಕ್ಕಳನ್ನು ಬಾವಿಗೆ ದೂಡಿ ತಾವು ಬಾವಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆಗೆ ಕಾರಣ ಏನೆಂದು ಪ್ರಸ್ತುತ ತಿಳಿದುಬಂದಿಲ್ಲ. ಪೊಲೀಸರು ಸ್ಥಳಕ್ಕೆ ಆಗಮಿಸಿ, ಎಲ್ಲರ ಮೃತದೇಹಗಳನ್ನು ಬಾವಿಯಿಂದ ಮೇಲಕ್ಕೆತ್ತಿದ್ದಾರೆ. ಈ ಘಟನೆಯ ಸಮಯದಲ್ಲಿ ಮಹಿಳೆಯ ಪತಿ ಕೆಲಸಕ್ಕೆ ಹೋಗಿದ್ದರು ಎಂದು ವರದಿಯಾಗಿದೆ. ಅವರ ಅನುಪಸ್ಥಿತಿಯಲ್ಲಿ, ಮಹಿಳೆ ಈ ಭಯಾನಕ ಹೆಜ್ಜೆ ಇಟ್ಟಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಾವಿನ ಕಾರಣವನ್ನು ತಿಳಿಯಲು ತನಿಖೆ ಆರಂಭಿಸಿದ್ದಾರೆ.

ತಾಯಿ ನಾಲ್ವರು ಹೆಣ್ಣುಮಕ್ಕಳನ್ನು ಬಾವಿಗೆ ದೂಡಿದ್ದರಿಂದ ಅವರೆಲ್ಲ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಕೆಸ್ಲಿ ಪೊಲೀಸ್ ಠಾಣಾ ಉಸ್ತುವಾರಿ ಲೋಕೇಶ್ ಪಟೇಲ್ ಮಾತನಾಡಿ, ಪೊಲೀಸ್ ಠಾಣಾ ವ್ಯಾಪ್ತಿಯ ಟಾಡಾ ಹೊರಠಾಣೆ ವ್ಯಾಪ್ತಿಯ ನನ್ಹಿ ದೇವಿ ಖಮರಿಯಾ ಗ್ರಾಮದ ನಿವಾಸಿ 28 ವರ್ಷದ ಸವಿತಾ ಬಾಯಿ ಲೋಧಿ ತನ್ನ ನಾಲ್ವರು ಹೆಣ್ಣುಮಕ್ಕಳನ್ನು ಬಾವಿಗೆ ಎಸೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಠಾಣೆಗೆ ಮಾಹಿತಿ ಬಂದಿತ್ತು. ಮಾಹಿತಿ ಆಧರಿಸಿ ನಾವು ಸ್ಥಳಕ್ಕೆ ಬಂದಾಗ, ಮಹಿಳೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ನಾವು ನೋಡಿದೆವು. ಈ ಬಗ್ಗೆ ಗ್ರಾಮಸ್ಥರನ್ನು ವಿಚಾರಿಸಿದಾಗ ಬುಧವಾರ ರಾತ್ರಿ ಮಹಿಳೆ ತನ್ನ ನಾಲ್ವರು ಹೆಣ್ಣು ಮಕ್ಕಳನ್ನು ಹರ್ಪಾಲ್ ಸಿಂಗ್ ಲೋಧಿ ಅವರ ಜಮೀನಿನ ಬಳಿಯ ಬಾವಿಗೆ ಎಸೆದು, ನಂತರ ತಾನೂ ಪ್ರಾಣ ಕಳದುಕೊಂಡಿದ್ದಾಳೆ ಎಂದು ತಿಳಿದುಬಂದಿದೆ. ಹೆಣ್ಣುಮಕ್ಕಳು 7, 5, 3 ಮತ್ತು 5 ತಿಂಗಳ ವಯಸ್ಸಿನವರು ಎಂದು ವರದಿಯಾಗಿದೆ.

ಮಹಿಳೆಯ ಪತಿ ಚಂದ್ರಭನ್ ಲೋಧಿ ಕೆಲಸಕ್ಕೆಂದು ಗ್ರಾಮದಿಂದ ಹೊರಗೆ ಹೋಗಿದ್ದರು. ಘಟನೆ ನಡೆದ ಸಮಯದಲ್ಲಿ ಆಕೆಯ ಅತ್ತೆ ಮತ್ತು ಅತ್ತಿಗೆ ಮನೆಯಲ್ಲಿ ಮಲಗಿದ್ದರು. ಮೃತರ ಕುಟುಂಬ ಮತ್ತು ಗ್ರಾಮಸ್ಥರಿಗೆ ಗುರುವಾರ ಬೆಳಗ್ಗೆ ಘಟನೆಯ ಬಗ್ಗೆ ಗೊತ್ತಾಗಿದೆ. ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದರು. ಗ್ರಾಮಸ್ಥರ ಸಹಾಯದಿಂದ, ನಾಲ್ವರು ಹೆಣ್ಣುಮಕ್ಕಳ ಶವಗಳನ್ನು ಹೊರತೆಗೆಯಲಾಯಿತು. ಪತಿ ಮನೆಯಲ್ಲಿ ಇಲ್ಲದಿರುವುದರಿಂದ ಮಹಿಳೆ ದುಃಖಿತಳಾಗಿದ್ದಳು ಎಂದು ವರದಿಯಾಗಿದೆ. ಇದು ಅವರು ಈ ಕಠಿಣ ಕ್ರಮ ಕೈಗೊಳ್ಳಲು ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.

ಪೊಲೀಸರ ಮಾಹಿತಿ ಹೀಗಿದೆ; ಘಟನೆ ಬಗ್ಗೆ ಮಾತನಾಡಿರುವ ಸಿಎಸ್ಪಿ ಲಲಿತ್ ಕಶ್ಯಪ್, ಈ ಘಟನೆ ಕೆಸ್ಲಿ ಪೊಲೀಸ್ ಠಾಣೆ ವ್ಯಾಪ್ತಿಯ ಖಮರಿಯಾ ಗ್ರಾಮದಲ್ಲಿ ಸಂಭವಿಸಿದೆ. ಚಂದ್ರವನ್ ಲೋಧಿ ಅವರ ಪತ್ನಿ ಸವಿತಾ ಬಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಹೆಣ್ಣುಮಕ್ಕಳು ಹತ್ತಿರದ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪೊಲೀಸರು ಐವರ ಶವಗಳನ್ನು ಹೊರತೆಗೆದಿದ್ದು, ಪಂಚನಾಮೆ ಪ್ರಕ್ರಿಯೆಗಳನ್ನು ನಡೆಸಿದ ನಂತರ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಘಟನೆಯ ಕಾರಣ ಇನ್ನೂ ತಿಳಿದುಬಂದಿಲ್ಲ. ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿ ಘಟನೆಯ ತನಿಖೆ ನಡೆಸುತ್ತಿದೆ. ಮಹಿಳೆ ಮಾನಸಿಕ ಒತ್ತಡ, ಕೌಟುಂಬಿಕ ಕಲಹ ಅಥವಾ ಇತರ ಅಂಶಗಳಿಂದ ಹೀಗೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದ್ದು, ಈ ನಿಟ್ಟಿನಲ್ಲಿ ತನಿಖೆ ಮಾಡಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!