ಉದಯವಾಹಿನಿ, ನವದೆಹಲಿ: ಹೆಚ್‌ಎನ್‌ ವ್ಯಾಲಿ ಹಾಗೂ ಕೆಸಿ ವ್ಯಾಲಿ ಎಸ್‌ಟಿಪಿಗಳ ನೀರನ್ನು ಮೂರನೇ ಹಂತದಲ್ಲಿ ಸಂಸ್ಕರಿಸಲು ಕಾಂಗ್ರೆಸ್‌ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಪಾದಯಾತ್ರೆ ನಡೆಸಿ ಹೋರಾಟ ಮಾಡುತ್ತೇವೆ ಎಂದು ಸಂಸದ ಡಾ.ಕೆ.ಸುಧಾಕರ್‌ ಎಚ್ಚರಿಕೆ ನೀಡಿದ್ದಾರೆ.

ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಚ್‌ಎನ್‌ ವ್ಯಾಲಿ, ಕೆಸಿ ವ್ಯಾಲಿ ಯೋಜನೆಯಡಿ ಚಿಕ್ಕಬಳ್ಳಾಪುರ, ಕೋಲಾರ ಭಾಗಕ್ಕೆ 2 ಹಂತಗಳಲ್ಲಿ ನೀರು ಸಂಸ್ಕರಣೆಯಾಗಿ ಬರುತ್ತಿದೆ. ಆದರೆ, ಇತ್ತೀಚೆಗೆ ಈ ನೀರು ಸರಿಯಾಗಿ ಸಂಸ್ಕರಣೆಯಾಗುತ್ತಿಲ್ಲ ಎಂಬ ದೂರು ಬಂದಿದೆ. ಈ ಬಗ್ಗೆ ಜಲಮಂಡಳಿ ಅಧಿಕಾರಿಗಳಿಗೆ ಸರ್ಕಾರ ಕಟ್ಟುನಿಟ್ಟಾದ ಸೂಚನೆ ನೀಡಬೇಕಿದೆ. ಸಿಂಗಾಪುರದಲ್ಲಿ ಕೊಳಚೆ ನೀರನ್ನು ಕುಡಿಯುವ ಮಟ್ಟಕ್ಕೆ ಶುದ್ಧೀಕರಣ ಮಾಡಲಾಗುತ್ತಿದೆ. ತೃತೀಯ ಹಂತದ ಸಂಸ್ಕರಣೆ ನಂತರ ಇನ್ನಷ್ಟು ಫಿಲ್ಟರ್‌ ಮಾಡಿ ಕುಡಿಯುವ ನೀರಿಗೆ ಬಳಸಲಾಗುತ್ತಿದೆ. ಆ ನೀರು ಹರಿಯುವ ನದಿಯಷ್ಟು ಶುದ್ಧವಾಗಿದೆ. ನಮೀಬಿಯಾದಲ್ಲೂ ಇದೇ ರೀತಿ ಬಳಸಲಾಗುತ್ತಿದೆ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಇನ್ನಷ್ಟು ಶುದ್ಧ ಮಾಡುವ ಅವಕಾಶ ಸರ್ಕಾರಕ್ಕಿದೆ. ಆ ಬದ್ಧತೆ ಹಾಗೂ ಜವಾಬ್ದಾರಿ ಸರ್ಕಾರಕ್ಕೆ ಇರಬೇಕು ಎಂದರು.
ಇದಕ್ಕೆ ಸಂಬಂಧಿಸಿದಂತೆ ಬಿಜೆಪಿ ಹೋರಾಟ ಮಾಡಲಿದೆ. ಆದರೆ, ಇದಕ್ಕಾಗಿ ಬಂದ್‌ ಮಾಡುವುದು ನಿಜವಾದ ಪರಿಹಾರವಾಗುವುದಿಲ್ಲ. ಈ ಸಮಯದಲ್ಲಿ ವಿದ್ಯಾರ್ಥಿಗಳ ಪರೀಕ್ಷೆ ನಡೆಯುತ್ತಿದೆ. ಬೀದಿ ಬದಿ ವ್ಯಾಪಾರಿಗಳು ಕೆಲಸ ಮಾಡುತ್ತಿದ್ದಾರೆ. ಬಂದ್‌ ಮಾಡಿದರೆ ಇವರೆಲ್ಲರಿಗೂ ಸಮಸ್ಯೆ ಹೆಚ್ಚಾಗುತ್ತದೆ. ಜನರಿಗೆ ಕಷ್ಟ ಕೊಡದೆ, ಯಾರಿಗೂ ನಷ್ಟ ಉಂಟುಮಾಡದೆ ಹೋರಾಟ ಮಾಡಬೇಕಿದೆ. ಬಂದ್‌ ಮಾಡಲು ಬಿಜೆಪಿ ಅಥವಾ ನಾನು ಬೆಂಬಲ ಕೊಡುವುದಿಲ್ಲ. ಬಯಲುಸೀಮೆಯ ಮೂರು ಜಿಲ್ಲೆಗಳಲ್ಲಿ ನಾನು ಪಾದಯಾತ್ರೆ ಮಾಡಿ, ಹಳ್ಳಿಗಳಿಗೆ ಭೇಟಿ ನೀಡಿ ಅರಿವು ಮೂಡಿಸುವ ಕೆಲಸ ಮಾಡುತ್ತೇನೆ. ಪಕ್ಷದ ಕಾರ್ಯಕರ್ತರೊಂದಿಗೆ ಹೋರಾಟ ಮಾಡುತ್ತೇನೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!