ಉದಯವಾಹಿನಿ, ಭಿಲ್ವಾರ(ರಾಜಸ್ಥಾನ): ಪಶ್ಚಿಮ ಏಷ್ಯಾದಲ್ಲಿ ಇರಾನ್-ಇಸ್ರೇಲ್-ಅಮೆರಿಕ ನಡುವಿನ ಯುದ್ಧ ಭಾರತದ ಜವಳಿ ಉದ್ಯಮದ ಮೇಲೆ ಪರಿಣಾಮ ಬೀರುತ್ತಿದೆ. ಯುದ್ದ ದೀರ್ಘಕಾಲ ಮುಂದುವರೆದರೆ ಜವಳಿಯ ಪ್ರಮುಖ ನೆಲೆಗಳಲ್ಲಿ ಒಂದಾಗಿರುವ ರಾಜಸ್ಥಾನದ ಭಿಲ್ವಾರ ಕೂಡ ಬಳಲಿದೆ ಎಂಬುದು ಉದ್ಯಮ ತಜ್ಞರ ಕಳವಳ.ಭಿಲ್ವಾರದಲ್ಲಿ ತಯಾರಾಗುವ ಡೆನಿಮ್ ಮತ್ತಿತರೆ ಜವಳಿಗಳು ಸೌದಿ ಅರೇಬಿಯಾ, ಕುವೈತ್, ಕತಾರ್, ಯುಎಇ, ಒಮಾನ್ ಮತ್ತು ಬಹ್ರೇನ್ಗಳಿಗೆ ರಫ್ತಾಗುತ್ತದೆ. ಆದರೆ, ಇದೀಗ ಈ ಗಲ್ಫ್ ರಾಷ್ಟ್ರಗಳು ಸಂಘರ್ಷಕ್ಕೆ ಒಳಗಾಗಿದ್ದು, ಜಾಗತಿಕ ಅನಿಶ್ಚಿತತೆ ಬಂದರುಗಳನ್ನು ಮುಚ್ಚುವಂತೆ ಮಾಡಿದೆ.
ಅಂತಾರಾಷ್ಟ್ರೀಯ ವ್ಯಾಪಾರ ಮಾರ್ಗ ಸಂಘರ್ಷಕ್ಕೆ ಒಳಗಾಗಿದ್ದು, ರಫ್ತುದಾರರು ಸಿದ್ಧಪಡಿಸಿದ ಸರಕುಗಳನ್ನು ರವಾನಿಸಲು ಹಿಂಜರಿಯುತ್ತಿದ್ದಾರೆ. ಜವಳಿ ಸಂಸ್ಕರಣಾ ಘಟಕಗಳಿಗೆ ಬಳಸುವ ರಾಸಾಯನಿಕಗಳು, ಬಣ್ಣಗಳು ಮತ್ತು ಪ್ಯಾಕೇಜಿಂಗ್ ವಸ್ತುಗಳ ಆಮದು ಬೆಲೆ ಏರಿಕೆಯಾಗಿದೆ.
ಮೇವಾರ್ ಚೇಂಬರ್ ಆಫ್ ಕಾಮರ್ಸ್‌ನ ಪ್ರಧಾನ ಕಾರ್ಯದರ್ಶಿ ಆರ್.ಕೆ.ಜೈನ್ ಮಾತನಾಡಿ, “ಭಿಲ್ವಾರ ಜಾಗತಿಕವಾಗಿ ಜವಳಿ ನಗರ ಎಂದು ಪ್ರಸಿದ್ಧವಾಗಿದೆ. ಈ ಜಿಲ್ಲೆಯಲ್ಲಿ 450ಕ್ಕೂ ಹೆಚ್ಚು ನೇಯ್ಗೆ ಘಟಕಗಳು, 20 ನೂಲುವ ಗಿರಣಿಗಳು, 21 ಸಂಸ್ಕರಣಾ ಘಟಕಗಳು ಮತ್ತು ಐದು ಡೆನಿಮ್ ಕೈಗಾರಿಕೆಗಳಿವೆ. 2.5 ಲಕ್ಷಕ್ಕೂ ಹೆಚ್ಚು ಜನರಿಗೆ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗ ಒದಗಿಸುತ್ತಿದೆ. ಈ ಕೈಗಾರಿಕೆಗಳು ಪ್ರತೀ ತಿಂಗಳು ಒಟ್ಟಾರೆ ಸುಮಾರು 100 ಮಿಲಿಯನ್ ಮೀಟರ್ ಬಟ್ಟೆ ಉತ್ಪಾದಿಸುತ್ತವೆ. ಅದರಲ್ಲಿ ಸುಮಾರು ಶೇ 10ರಷ್ಟು ವಿದೇಶಗಳಿಗೆ ರಫ್ತಾಗುತ್ತದೆ. ಇಸ್ರೇಲ್, ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧ ಈಗಾಗಲೇ ಜಾಗತಿಕವಾಗಿ ಪರಿಣಾಮ ಬೀರುತ್ತಿದೆ. ಸಂಘರ್ಷ ದೀರ್ಘಕಾಲದವರೆಗೆ ಮುಂದುವರಿದರೆ ಗಂಭೀರ ಪರಿಣಾಮದ ಆತಂಕವಿದೆ” ಎಂದು ಅವರು ತಿಳಿಸಿದರು. “ಉದ್ಯಮದ ಅಂದಾಜಿನಂತೆ, ಭಿಲ್ವಾರಾದಲ್ಲಿ ಉತ್ಪಾದಿಸುವ ನೂಲು ಬಾಂಗ್ಲಾದೇಶ ಮತ್ತು ಹಲವಾರು ಯುರೋಪಿಯನ್ ದೇಶಗಳಿಗೆ ರಫ್ತು ಆಗುತ್ತದೆ. ಆದರೆ, ಬಟ್ಟೆ ಮತ್ತು ಡೆನಿಮ್ ಅನ್ನು ಕುವೈತ್, ಸೌದಿ ಅರೇಬಿಯಾ, ಯುಎಇ, ಒಮಾನ್, ಕತಾರ್ ಮತ್ತು ಬಹ್ರೇನ್ ಸೇರಿದಂತೆ ಗಲ್ಫ್ ರಾಷ್ಟ್ರಗಳಿಗೆ ರವಾನಿಸಲಾಗುತ್ತದೆ”.
