ಉದಯವಾಹಿನಿ, ಶ್ರೀನಗರ(ಜಮ್ಮು ಮತ್ತು ಕಾಶ್ಮೀರ): ಇರಾನ್‌ನಿಂದ ಬಸ್‌ಗಳಲ್ಲಿ ಹೊರಟ ಭಾರತೀಯ ವಿದ್ಯಾರ್ಥಿಗಳ ಮೊದಲ ಬ್ಯಾಚ್ ಅರ್ಮೇನಿಯಾ ದೇಶ ತಲುಪಿದೆ. ಟೆಹ್ರಾನ್ ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯ, ಶಾಹಿದ್ ಬೆಹೆಶ್ಟಿ ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯ, ಇರಾನ್ ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯ ಮತ್ತು ಉರ್ಮಿಯಾ ವಿಶ್ವವಿದ್ಯಾಲಯದಿಂದ ಸುಮಾರು 100 ವಿದ್ಯಾರ್ಥಿಗಳು ಯುದ್ಧಪೀಡಿತ ಇರಾನ್​​ನಿಂದ ಭಾರತಕ್ಕೆ ಮರಳುತ್ತಿದ್ದಾರೆ. ಉರ್ಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿ ಮೆಹಕ್ ಹುಸೇನ್, ಗುರುವಾರ ಇರಾನ್​ನಿಂದ ಹೊರಟು ಅರ್ಮೇನಿಯಾ ತಲುಪಿರುವುದಾಗಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಮಾರ್ಚ್ 15ರಂದು ಅರ್ಮೇನಿಯಾದ ಯೆರೆವಾನ್‌ನಲ್ಲಿರುವ ಜ್ವಾರ್ಟ್‌ನಾಟ್ಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ ಎಂದು ಭಾರತೀಯ ರಾಯಭಾರ ಕಚೇರಿಯೊಂದಿಗೆ ಅವರ ವಾಪಸಾತಿಯನ್ನು ನೋಡಿಕೊಳ್ಳುತ್ತಿರುವ ಅಖಿಲ ಭಾರತ ವೈದ್ಯಕೀಯ ವಿದ್ಯಾರ್ಥಿಗಳ ಸಂಘ ಮಾಹಿತಿ ನೀಡಿದೆ. ನೆರೆಯ ಅರ್ಮೇನಿಯಾ ಮತ್ತು ಅಜೆರ್ಬೈಜಾನ್‌ ಮೂಲಕ ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆತರುವ ವೆಚ್ಚವನ್ನು ರಾಯಭಾರ ಕಚೇರಿಯೇ ನೋಡಿಕೊಳ್ಳುತ್ತಿದೆ. ಇರಾನ್‌ನ ಅರಾಕ್ ವಿಶ್ವವಿದ್ಯಾಲಯದಲ್ಲಿ ಭಾರತೀಯ ವಿದ್ಯಾರ್ಥಿಗಳು ವಾಯುದಾಳಿಗಳಿಂದ ಆತಂಕಗೊಂಡು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವಂತೆ ಒತ್ತಾಯಿಸಿದ್ದಾರೆ.
ಕಳೆದ ವಾರ ಭಾರತೀಯ ರಾಯಭಾರ ಕಚೇರಿಯು ಟೆಹ್ರಾನ್ ಸೇರಿದಂತೆ ವಿವಿಧ ನಗರಗಳಿಂದ ವಿದ್ಯಾರ್ಥಿಗಳನ್ನು ಕೋಮ್‌ಗೆ ಸ್ಥಳಾಂತರಿಸಿತ್ತು.

ಸ್ಥಳಾಂತರಿಸುವಿಕೆಯನ್ನು ಕೈಗೊಳ್ಳದಿದ್ದಕ್ಕಾಗಿ ಭಾರತೀಯ ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡ ವಿದ್ಯಾರ್ಥಿಗಳಲ್ಲೊಬ್ಬರು, ತಮ್ಮ ಟಿಕೆಟ್‌ಗಳ ಬೆಲೆ 70ರಿಂದ 80 ಸಾವಿರ ರೂ.ಗಳಾಗಿದ್ದು, ರಾಯಭಾರ ಕಚೇರಿ ಗಡಿ ತಲುಪಲು ಬಸ್ ವ್ಯವಸ್ಥೆ ಮಾತ್ರ ಮಾಡಿದೆ ಎಂದು ದೂರಿದ್ದರು. ವಾಯುದಾಳಿಯ ನಂತರ ನಾವು ಚಿಂತಿತರಾಗಿದ್ದೇವೆ. ನಮ್ಮ ಟಿಕೆಟ್‌ಗಳು ರದ್ದಾಗುತ್ತಿವೆ. ನಮ್ಮ ಹಣವೂ ವಾಪಸ್​ ಸಿಗುತ್ತಿಲ್ಲ. ಪ್ರಯಾಣದ ವೆಚ್ಚ ಭರಿಸಲು ನಾವು ಸಿದ್ಧರಿದ್ದೇವೆ. ಆದರೆ ಕನಿಷ್ಠ ನಮ್ಮನ್ನು ಯುದ್ಧಪೀಡಿತ ಪ್ರದೇಶದಿಂದ ಹೊರಗೆ ಕರೆದೊಯ್ಯಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.ಇರಾನ್​​ನಲ್ಲಿನ ಉದ್ವಿಗ್ನತೆಯಿಂದಾಗಿ ತಮ್ಮ ಮಕ್ಕಳನ್ನು ಸ್ಥಳಾಂತರಿಸುವಂತೆ ಪೋಷಕರು ಅಧಿಕಾರಿಗಳನ್ನು ಮೂಲಕ ಪ್ರಧಾನಿ ಮತ್ತು ವಿದೇಶಾಂಗ ಸಚಿವಾಲಯಕ್ಕೆ ಮನವಿ ಮಾಡಿದ್ದರು.

 

Leave a Reply

Your email address will not be published. Required fields are marked *

error: Content is protected !!