ಉದಯವಾಹಿನಿ, ಬುಲಂದ್‌ಶಹರ್ (ಉತ್ತರ ಪ್ರದೇಶ): ಕೇಂದ್ರ ಲೋಕಸೇವಾ ಆಯೋಗದ (UPSC) ನಾಗರೀಕ ಸೇವೆಗಳ ಪರೀಕ್ಷೆಯಲ್ಲಿ ಉತ್ತರ ಪ್ರದೇಶದ ಬುಲಂದ್‌ಶಹರ್‌ನ ಶಿಖಾ ಗೌತಮ್ ಎಂಬ ಯುವತಿಯು ಇತ್ತೀಚೆಗೆ ಪ್ರಕಟಗೊಂಡ UPSC ಫಲಿತಾಂಶದಲ್ಲಿ ತಾವು 113ನೇ ರ‍್ಯಾಂಕ್ ಪಡೆದುಕೊಂಡಿರುವುದಾಗಿ ಹೇಳಿಕೊಂಡಿದ್ದಳು. ಆದರೆ, ಇದು ಸುಳ್ಳು ಎಂದು ತನಿಖೆಯಿಂದ ಸಾಬೀತಾಗಿದೆ. ಭೂದ್ ಪ್ರದೇಶದ ಅಂಬೇಡ್ಕರ್ ಕಾಲೋನಿ ನಿವಾಸಿಯಾಗಿರುವ ಶಿಖಾ, ಮಾರ್ಚ್ 6 ರಂದು ಬಿಡುಗಡೆಯಾದ UPSC 2025ರ ಫಲಿತಾಂಶಗಳಲ್ಲಿ ತಾನು 113ನೇ ರ‍್ಯಾಂಕ್ ಗಳಿಸಿರುವುದಾಗಿ ಘೋಷಿಸಿಕೊಂಡಿದ್ದರು. ಅಲ್ಲದೇ, ಸಿಹಿ ಹಂಚಿ ಸಂಭ್ರಮ ಪಟ್ಟಿದ್ದರು. ಆದರೆ, ತನಿಖೆಯಲ್ಲಿ ಆಕೆ UPSC ತೇರ್ಗಡೆ ಆಗಿಯೇ ಇಲ್ಲ ಎನ್ನುವುದು ಗೊತ್ತಾಗಿದೆ.
ತನಿಖೆ ವೇಳೆ ಹರಿಯಾಣದ ರೋಹ್ಟಕ್ ಮೂಲದ ಶಿಖಾ ಸೆಹ್ರಾವತ್ ಎಂಬುವವರೇ ನಿಜವಾದ 113ನೇ ರ‍್ಯಾಂಕ್ ವಿಜೇತೆ ಎಂಬುದು ಖಚಿತಪಟ್ಟಿದೆ.ತನ್ನ ರ‍್ಯಾಂಕ್ ಅನ್ನು ಬೇರೊಬ್ಬರು ತಮಗೇ ಬಂದಿದೆ ಎಂದು ಹೇಳಿಕೊಳ್ಳುತ್ತಿರುವುದನ್ನು ಗಮನಿಸಿದ ಹರಿಯಾಣದ ಶಿಖಾ ಸೆಹ್ರಾವತ್, ಕೂಡಲೇ ಯುಪಿಎಸ್‌ಸಿಗೆ ಇಮೇಲ್ ಕಳುಹಿಸಿ ಸ್ಪಷ್ಟನೆ ಕೋರಿದ್ದರು. ಈ ದೂರಿನ ಮೇರೆಗೆ ಜಿಲ್ಲಾಡಳಿತ ತನಿಖೆ ನಡೆಸಿದಾಗ ಎಲ್ಲವೂ ಬಯಲಾಗಿದೆ.ತನಿಖಾಧಿಕಾರಿಗಳು ಉತ್ತರ ಪ್ರದೇಶದ ಶಿಖಾ ಗೌತಮ್ ಮನೆಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದಾಗ ಆಕೆಯ ಹೆಸರು ‘ಶಿಖಾ ರಾಣಿ’ ಎಂದು ದಾಖಲಾಗಿತ್ತು. ಅಲ್ಲದೆ, ಆಕೆ ಮುಖ್ಯ ಪರೀಕ್ಷೆಯಲ್ಲೇ (Mains) ಉತ್ತೀರ್ಣಳಾಗಿರಲಿಲ್ಲ ಎಂಬ ಆಘಾತಕಾರಿ ಸತ್ಯ ಕೂಡ ಬೆಳಕಿಗೆ ಬಂದಿದೆ.
