ಉದಯವಾಹಿನಿ, ಟೆಹರಾನ್: ಇಸ್ರೇಲ್, ಅಮೆರಿಕ ಜಂಟಿಯಾಗಿ ನಡೆಸಿದ ವೈಮಾನಿಕ ದಾಳಿ ವೇಳೆ ಹತ್ಯೆಯಾದ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಪತ್ನಿ ಮರೆ ಖೋಜಾಸ್ತೆ ಬಾಗರ್ಜಾಡೆ (79) ಅವರು ಜೀವಂತವಾಗಿದ್ದಾರೆ ಎಂದು ಇರಾನ್ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.
ಟೆಹರಾನ್ ಮೇಲೆ ಫೆಬ್ರುವರಿ 28ರಂದು ದಾಳಿಯಾದಾಗ ಮರೆ ಅವರು ಖಮೇನಿ ಜೊತೆಗಿದ್ದರು. ಖಮೇನಿ ಸ್ಥಳದಲ್ಲೇ ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಮರೆ, ಕೋಮಾ ಸ್ಥಿತಿಯಲ್ಲಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 2ರಂದು ಮೃತಪಟ್ಟಿದ್ದಾರೆ ಎನ್ನಲಾಗಿತ್ತು. ಆದರೆ, ಅದು ಸುಳ್ಳು ಎಂದು ಇದೀಗ ವರದಿಯಾಗಿದೆ.
ಅಯತೊಲ್ಲಾ ಅಲಿ ಹತ್ಯೆ ಬಳಿಕ ಇರಾನ್‌ನ ಹೊಸ ಸರ್ವೋಚ್ಚ ನಾಯಕನಾಗಿ ನೇಮಕಗೊಂಡಿರುವ ಮೊಜ್ಜಬಾ ಖಮೇನಿ ಅವರು, ಸಂಘರ್ಷದ ಕುರಿತು ಗುರುವಾರ ಮೊದಲ ಪ್ರತಿಕ್ರಿಯೆ ನೀಡಿದ್ದರು. ಹುತಾತ್ಮರ ರಕ್ತಕ್ಕೆ ಪ್ರತೀಕಾರ ತೀರಿಸಿಕೊಳ್ಳುತ್ತೇವೆ. ಅಮೆರಿಕದ ನೆಲೆಗಳ ಮೇಲೆ ದಾಳಿ ಮಾಡುತ್ತೇವೆ ಎಂದು ಗುಡುಗಿದ್ದರು.
ಹಾಗೆಯೇ, ಶತ್ರು ರಾಷ್ಟ್ರಗಳ ಮೇಲೆ ಒತ್ತಡ ಹೇರುವ ಸಲುವಾಗಿ, ಇರಾನ್ ಕರಾವಳಿ ಮೂಲಕ ಹಾದುಹೋಗುವ ಹಾಗೂ ಜಾಗತಿಕ ಮಾರುಕಟ್ಟೆಗೆ ಪ್ರಮುಖ ಮಾರ್ಗವಾಗಿರುವ ಹೊರ್ಮುಜ್ ಜಲಸಂಧಿಯನ್ನು ಮುಚ್ಚಬೇಕಿದೆ ಎಂದಿದ್ದ ಅವರು, ಪಶ್ಚಿಮ ಏಷ್ಯಾ ಭಾಗದಲ್ಲಿ ಇರುವ ತನ್ನ ನೆಲೆಗಳನ್ನು ಅಮೆರಿಕವು ಸ್ಥಗಿತಗೊಳಿಸಬೇಕು ಎಂದೂ ಎಚ್ಚರಿಕೆ ನೀಡಿದ್ದರು.
