ಉದಯವಾಹಿನಿ, ಬಾಲಿವುಡ್ ನಟಿ ದೀಪಿಕಾ ಪಡುಕೋಣ್ ಸಿನಿಮಾಗಳಲ್ಲಿ ದಿನಕ್ಕೆ ಎಂಟು ಗಂಟೆಗಳ ಕೆಲಸದ ಶಿಫ್ಟ್ ಇರಬೇಕು ಎಂಬ ಬೇಡಿಕೆ ಮುಂದಿಟ್ಟಿರುವ ವಿಚಾರ ಈಗ ಚಿತ್ರರಂಗದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಕಾರಣದಿಂದಲೇ ‘ಸ್ಪಿರಿಟ್’ ಮತ್ತು ‘ಕಲ್ಕಿ 2’ ಸಿನಿಮಾಗಳ ಚಿತ್ರೀಕರಣದಿಂದ ಅವರು ದೂರ ಉಳಿದಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ. ಈ ವಿಷಯದ ಬಗ್ಗೆ ಹಲವು ಸೆಲೆಬ್ರಿಟಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದು, ಇತ್ತೀಚೆಗೆ ನಟ ಕುನಾಲ್ ಖೇಮು ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

ಸೋಹಾ ಅಲಿ ಖಾನ್ ನಡೆಸುವ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಕುನಾಲ್ ಖೇಮು, ಸಿನೆಮಾ ವೃತ್ತಿಯ ವಾಸ್ತವತೆಗಳನ್ನು ಕಲಾವಿದರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. ಪ್ರತಿಯೊಂದು ವೃತ್ತಿಗೂ ತನ್ನದೇ ಆದ ನಿರೀಕ್ಷೆಗಳು ಇರುತ್ತವೆ. ಅದನ್ನು ಅರಿತುಕೊಂಡು ಅದಕ್ಕೆ ತಕ್ಕಂತೆ ಕೆಲಸ ಮಾಡುವುದು ಮುಖ್ಯ ಎಂದು ಅವರು ಅಭಿಪ್ರಾಯಪಟ್ಟರು. ಹೆಚ್ಚು ಸಂಬಳ ಪಡೆಯಬೇಕು, ಆದರೆ ಕಡಿಮೆ ಸಮಯ ಕೆಲಸ ಮಾಡಬೇಕು ಎಂದು ನಿರೀಕ್ಷಿಸುವುದು ಸರಿಯಲ್ಲ. ಸಿನಿಮಾ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಯಶಸ್ಸು ಪಡೆಯಲು ಹೆಚ್ಚಿನ ಪರಿಶ್ರಮ ಅಗತ್ಯವಾಗುತ್ತದೆ ಎಂದು ಕುನಾಲ್ ಹೇಳಿದರು. ಕೆಲಸದ ಸಮಯದ ಮೇಲೆ ಹೆಚ್ಚು ನಿಯಂತ್ರಣ ಬೇಕಿದ್ದರೆ ಕಲಾವಿದರು ಸ್ವಂತ ಸಿನಿಮಾಗಳನ್ನು ನಿರ್ಮಿಸಿ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಅವರು ಸಲಹೆ ನೀಡಿದರು.
ಇದೇ ವೇಳೆ ಸೈಫ್ ಅಲಿ ಖಾನ್ ಕೆಲಸ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನ ಸಾಧಿಸುವುದು ಸಾಧ್ಯ ಎಂದು ಹೇಳಿದ್ದು ಅದು ವ್ಯಕ್ತಿಯ ಕೆಲಸದ ಯೋಜನೆಯ ಮೇಲೆ ಅವಲಂಬಿತವಾಗಿರುತ್ತದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!