ಉದಯವಾಹಿನಿ,  ಬೇಸಿಗೆ ಧಗೆ ಜೋರಾಗಿದೆ. ಮನೆ ಒಳಗಿದ್ರೂ ಉರಿ ಉರಿ ಅನುಭವ. ಫ್ಯಾನ್‌ , ಎಸಿ ಜೊತೆಗೆ ದೇಹ ತಂಪು ಮಾಡುವ ಆಹಾರ (Food), ಜ್ಯೂಸ್‌ ಗಳತ್ತ ಜನ ಮುಖ ಮಾಡ್ತಿದ್ದಾರೆ. ಬೇಸಿಗೆಯಲ್ಲಿ ದೇಹವನ್ನು ತಂಪು ಮಾಡುವ ಆರೋಗ್ಯಕರ ಪಾನೀಯಗಳು ಕೊಟ್ಟಷ್ಟು ಹಿತಕರ ಅನುಭವವನ್ನು ಮತ್ತ್ಯಾವ ಫ್ಯಾಕ್ಡ್ ಕೂಲ್‌ ಡ್ರಿಂಕ್ಸ್‌‌ ಕೊಡಲಾರವು. ಇಂತಹ ನ್ಯಾಚುರಲ್‌ ಜ್ಯೂಸ್‌ಗಳಲ್ಲಿ ಕೋಕಮ್ (Kokum) ಜ್ಯೂಸ್ ಮತ್ತು ನೆಲ್ಲಿಕಾಯಿ ಜ್ಯೂಸ್ ಪ್ರಮುಖವಾಗಿವೆ. ಸಾಂಪ್ರದಾಯಿಕವಾಗಿ ಬಳಸುವ ಈ ಎರಡು ಸೂಪರ್‌ ಪಾನೀಯಗಳು ದೇಹಕ್ಕೆ ತಂಪು ನೀಡುವುದರ ಜೊತೆಗೆ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತವೆ.
ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸಿರಪ್, ಪೌಡರ್ ಮತ್ತು ರೆಡಿಮೇಡ್ ರೂಪದಲ್ಲೂ ಈ ಜ್ಯೂಸ್‌ಗಳು ಲಭ್ಯವಿದ್ದರೂ, ಮೂಲ ಕೋಲ್ಡ್-ಪ್ರೆಸ್ಡ್ ರೂಪದಲ್ಲಿ ತಯಾರಿಸಿದ ಜ್ಯೂಸ್ ಆರೋಗ್ಯಕ್ಕೆ ಹೆಚ್ಚು ಲಾಭ. ಏಕೆಂದರೆ ರೆಡಿಮೇಡ್ ಪಾನೀಯಗಳಲ್ಲಿ ಕೃತಕ ಬಣ್ಣ, ಸುವಾಸನೆ ಮತ್ತು ಸೇರ್ಪಡೆಗಳು ಇರುವ ಕಾರಣ ಆರೋಗ್ಯಕ್ಕೆ ಇವು ಅಷ್ಟೊಂದು ಒಳ್ಳೆಯದಲ್ಲ. ಬೇಸಿಗೆಯಲ್ಲಿ ಕೋಕಮ್ ಅಥವಾ ನೆಲ್ಲಿಕಾಯಿ ಜ್ಯೂಸ್‌ಗಳ ಉಪಯೋಗ
ಬೇಸಿಗೆಯ ಸಮಯದಲ್ಲಿ ಹೆಚ್ಚಿನ ಉಷ್ಣತೆಯಿಂದ ಜೀರ್ಣಾಂಗ ವ್ಯವಸ್ಥೆ ನಿಧಾನಗೊಳ್ಳುತ್ತದೆ. ಇದರಿಂದ ಜನರು ಕಡಿಮೆ ಆಹಾರ ಸೇವಿಸುತ್ತಾರೆ. ಇಂತಹ ಸಂದರ್ಭಗಳಲ್ಲಿ ಕೋಕಮ್ ಅಥವಾ ನೆಲ್ಲಿಕಾಯಿ ಜ್ಯೂಸ್‌ನಂತಹ ಪೌಷ್ಟಿಕ ಪಾನೀಯಗಳು ದೇಹಕ್ಕೆ ಜಲಸಂಚಯನ ಹಾಗೂ ಪೋಷಕಾಂಶಗಳನ್ನು ಒದಗಿಸುತ್ತವೆ. ಈ ಎರಡು ಜ್ಯೂಸ್‌ಗಳು ದೇಹವನ್ನು ತಂಪಾಗಿಸುವುದರಲ್ಲಿ ಎತ್ತಿದ ಕೈ. ಆದ್ರೆ ನಿಮ್ಮ ದೇಹಕ್ಕೆ ಯಾವುದು ಸೂಕ್ತ ಅನ್ನೋದು ನಿಮ್ಮ ಜೀರ್ಣಕ್ರಿಯೆ, ವಯಸ್ಸು, ಜೀವನಶೈಲಿ ಮತ್ತು ಆರೋಗ್ಯ ಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ.
ಕೋಕಮ್ ಜ್ಯೂಸ್‌ನ ಪೌಷ್ಟಿಕಾಂಶ
ಕೋಕಮ್ (Garcinia Indica) ಹಣ್ಣಿನಿಂದ ತಯಾರಾಗುವ ಈ ಜ್ಯೂಸ್ ಬೇಸಿಗೆಯಲ್ಲಿ ಹೆಚ್ಚು ಜನಪ್ರಿಯವಾಗಿದೆ. ಸಾಮಾನ್ಯವಾಗಿ ಒಣಗಿಸಿದ ಕೋಕಮ್ ತೊಗಟೆಯನ್ನು ನೀರಿನಲ್ಲಿ ನೆನೆಸಿ ಈ ಪಾನೀಯ ತಯಾರಿಸಲಾಗುತ್ತದೆ. ಕೋಕಮ್ ಜ್ಯೂಸ್ ಆರೋಗ್ಯಕರ ಪಾನೀಯವಾಗಿದ್ದು ದೇಹಕ್ಕೆ ಹಲವು ಪೌಷ್ಟಿಕಾಂಶಗಳನ್ನು ಒದಗಿಸುತ್ತದೆ. ಇದರಲ್ಲಿ ಇರುವ ವಿಟಮಿನ್ C ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ದೇಹವನ್ನು ಸೋಂಕುಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.
ಕೋಕಮ್‌ನಲ್ಲಿರುವ ಆಂಥೋಸಯಾನಿನ್‌ಗಳು ಬಲವಾದ ಆ್ಯಂಟಿ ಆಕ್ಸಿಡೆಂಟ್‌ಗಳಾಗಿ ಕಾರ್ಯನಿರ್ವಹಿಸಿ ದೇಹದಲ್ಲಿನ ಕೋಶಗಳನ್ನು ಹಾನಿಯಿಂದ ಕಾಪಾಡುತ್ತವೆ. ಇದಲ್ಲದೆ ಗಾರ್ಸಿನಾಲ್ ಎಂಬ ಸಂಯುಕ್ತ ಉರಿಯೂತವನ್ನು ಕಡಿಮೆ ಮಾಡಲು ಸಹಕಾರಿ. ಹೈಡ್ರಾಕ್ಸಿಸಿಟ್ರಿಕ್ ಆಮ್ಲ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಜೊತೆಗೆ ಕೋಕಮ್ ಜ್ಯೂಸ್‌ನಲ್ಲಿ ಇರುವ ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಮೊದಲಾದ ಖನಿಜಗಳು ದೇಹದ ವಿವಿಧ ಕಾರ್ಯಗಳು ಸರಿಯಾಗಿ ನಡೆಯಲು ನೆರವಾಗುತ್ತವೆ. ಹಾಗೆಯೇ ಬೇಸಿಗೆಯಲ್ಲಿ ಇದು ದೇಹವನ್ನು ಒಳಗಿನಿಂದ ಹೈಡ್ರೇಟ್‌ ಆಗಿಡುತ್ತದೆ. ಒಟ್ಟಿನಲ್ಲಿ ಕೋಕಮ್ ಜ್ಯೂಸ್ ದೇಹವನ್ನು ತಂಪಾಗಿಸಿ ಆರೋಗ್ಯವನ್ನು ಕಾಪಾಡಲು ಸಹಕಾರಿ ಪಾನೀಯವಾಗಿದೆ.

Leave a Reply

Your email address will not be published. Required fields are marked *

error: Content is protected !!