ಉದಯವಾಹಿನಿ, ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಯುದ್ದದಿಂದಾಗಿ ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಾಗಿದೆ. ಎಲ್‌ಪಿಜಿ ಸಿಲಿಂಡರ್ ಪೂರೈಕೆ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡಲು ದೆಹಲಿ ಪೋಲಿಸರಿಗೆ ರಜೆಯನ್ನ ರದ್ದುಗೊಳಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶಿಸಲಾಗಿದೆ.

ರಾಜಧಾನಿಯಾದ್ಯಂತ ಎಲ್‌ಪಿಜಿ ಸಿಲಿಂಡರ್ ಗೋಡೌನ್‌ಗಳು, ಅಂಗಡಿಗಳು, ರೀಫಿಲ್ಲಿಂಗ್ ಸ್ಟೇಷನ್‌ಗಳು ಮತ್ತು ಗೋದಾಮುಗಳ ಹೊರಗೆ 24*7 ಭದ್ರತೆ ನಿಯೋಜಿಸಲು ಆದೇಶಿಸಲಾಗಿದೆ. ಎಲ್‌ಪಿಜಿ ಗೋಡೌನ್‌ಗಳು ಮತ್ತು ರೀಫಿಲ್ಲಿಂಗ್ ಸ್ಟೇಷನ್‌ಗಳ ಸುತ್ತಲೂ ಭದ್ರತೆಯನ್ನು ಬಲಪಡಿಸಲು ಮತ್ತು ರಾಷ್ಟ್ರ ರಾಜಧಾನಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯನ್ನು ಪರಿಶೀಲಿಸಲು ಗೃಹ ಸಚಿವಾಲಯದ ಸೂಚನೆಗಳನ್ನು ಅನುಸರಿಸುವ ಮೂಲಕ ಈ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಮುಂದಿನ ಆದೇಶದವರೆಗೆ ಯಾವುದೇ ಸಿಬ್ಬಂದಿಗೆ ದಿನನಿತ್ಯದ ರಜೆಗಳನ್ನು ನೀಡಬಾರದು. ತುರ್ತು ಸಂದರ್ಭಗಳಲ್ಲಿ ಮಾತ್ರ ರಜೆಗಳನ್ನು ಮಂಜೂರು ಮಾಡಬೇಕು, ಮಂಜೂರಾತಿ ಪ್ರಾಧಿಕಾರದಿಂದ ಸರಿಯಾಗಿ ಪರಿಶೀಲಿಸಿ ರಜೆ ನೀಡಬೇಕು ಎಂದು ಆದೇಶ ಹೊರಡಿಸಿದ್ದು, ಕಾಳಸಂತೆ ಬಗ್ಗೆ ಗಮನ ಹರಿಸುವಂತೆ ಕೂಡ ಆದೇಶ ಹೊರಡಿಸಲಾಗಿದೆ. ಯಾವುದೇ ರೀತಿ ಕಾಳಸಂತೆಯಲ್ಲಿ ಎಲ್‌ಪಿಜಿ ಸಿಲಿಂಡರ್ ಮಾರಾಟವಾಗಬಾರದು. ಈ ಬಗ್ಗೆ ಗಮನ ಹರಿಸಿ ಕ್ರಮಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!