ಉದಯವಾಹಿನಿ, ಚೆನ್ನೈ: ಕುಡಿದ ಮತ್ತಲ್ಲಿ ಆಟೋದಲ್ಲೇ ಕುಳಿತು ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ಗುಂಪೊಂದು ವ್ಯಕ್ತಿಯನ್ನು ಥಳಿಸಿದ್ದು, ಪರಿಣಾಮ ವ್ಯಕ್ತಿ ಸಾವನ್ನಪ್ಪಿದ ಘಟನೆ ಚೆನ್ನೈನಲ್ಲಿ ನಡೆದಿದೆ.ಮೃತ ವ್ಯಕ್ತಿಯನ್ನು 30 ವರ್ಷದ ಕಲೈಸೆಲ್ವನ್ ಎಂದು ಗುರುತಿಸಲಾಗಿದ್ದು, ಸ್ನೇಹಿತನೊಂದಿಗೆ ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.
) ಮೃತ ವ್ಯಕ್ತಿ ಕುಡಿದ ಮತ್ತಿನಲ್ಲಿ ಸ್ನೇಹಿತನೊಂದಿಗೆ ಆಟೋದಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಆಟೋದಲ್ಲೇ ಕುಳಿತು ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಇದರಿಂದ ಕಲೈಸೆಲ್ವನ್ ಹಾಗೂ ಮಹಿಳೆಯ ನಡುವೆ ವಾಗ್ವಾದ ಉಂಟಾಗಿದ್ದು, ಸ್ಥಳೀಯರು ಗಮನಿಸಿದ್ದಾರೆ.
ಸ್ಥಳಕ್ಕೆ ಬಂದ ಜನರು ಕಲೈಸೆಲ್ವನ್ ಮೇಲೆ ಹಲ್ಲೆ ನಡೆಸಿದ್ದು, ಪರಿಣಾಮ ಪ್ರಜ್ಞೆ ತಪ್ಪಿದೆ. ಕೂಡಲೇ ವ್ಯಕ್ತಿಯನ್ನು ಸ್ಟಾನ್ಲಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ವೈದ್ಯರು ಸಾವನ್ನಪ್ಪಿರುವುದಾಗಿ ದೃಢಪಡಿಸಿದರು.
ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಹಲ್ಲೆ ನಡೆಸಿದ ವ್ಯಕ್ತಿ ಗುರುತಿಸಲು ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ತನಿಖೆಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
