ಉದಯವಾಹಿನಿ, ಹೈದರಾಬಾದ್: ಯುವಕನೊಬ್ಬ ತನ್ನನ್ನು ಮದುವೆ ಆಗಲು ನಿರಾಕರಿಸಿದ ಯುವತಿಗೆ ಹೆಚ್‌ಐವಿ ಸೋಂಕಿತರ ರಕ್ತವಿದ್ದ ಇಂಜೆಕ್ಷನ್ ಚುಚ್ಚಿರುವ ಆರೋಪ ಕೇಳಿ ಬಂದಿದೆ. ಹೈದರಾಬಾದ್‌ನ ಪೋಚಾರಂನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.

ಮದುವೆಗೆ ನಿರಾಕರಣೆ: ಯುವಕ-ಯುವತಿ ಪರಿಚಯಸ್ಥರಾಗಿದ್ದು, ಮದುವೆಯಾಗುವವರಿದ್ದರು. ಎರಡೂ ಕಡೆಯ ಕುಟುಂಬಗಳು ಮದುವೆಗೆ ನಿಶ್ಚಯ ಕೂಡ ಮಾಡಿಕೊಂಡಿದ್ದವು. ಆದರೆ, ಇತ್ತೀಚೆಗಷ್ಟೇ ಯುವಕನ ಕಡೆಯವರಲ್ಲಿ ಏಡ್ಸ್​ ಇದೆ ಎಂಬ ಕಾರಣಕ್ಕೆ ಯುವತಿಯು ಮದುವೆಗೆ ನಿರಾಕರಿಸಿದ್ದಳು. ಇದರಿಂದ ಅಸಮಾಧಾನಗೊಂಡ ಯುವಕ, ಮಾರ್ಚ್ 11 ರಂದು ಯುವತಿಯ ಮನೆಗೆ ಹೋಗಿ ತನ್ನನ್ನು ಮದುವೆಯಾಗುವಂತೆ ಒತ್ತಡ ಹೇರಿದ್ದಾನೆ. ಈ ಪ್ರಸ್ತಾಪವನ್ನು ದೃಢವಾಗಿ ತಿರಸ್ಕರಿಸಿದಾಗ, ಸಿಟ್ಟಿನಲ್ಲಿ ಯುವಕ ಆಕೆಗೆ ಹೆಚ್‌ಐವಿ ಸೋಂಕಿತ ರಕ್ತವಿದ್ದ ಇಂಜೆಕ್ಷನ್ ಚುಚ್ಚಿದ್ದಾನೆ ಎಂಬುದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಘಟನೆಯ ಬಳಿಕ ಯುವತಿಯಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ಕುಟುಂಬ ಸದಸ್ಯರು ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ವೈದ್ಯಕೀಯ ಪರೀಕ್ಷೆಯ ಸಮಯದಲ್ಲಿ, ಯುವತಿಗೆ ಹೆಚ್‌ಐವಿ ಸೋಂಕಿತರ ರಕ್ತವಿದ್ದ ಇಂಜೆಕ್ಷನ್ ಚುಚ್ಚಿರುವುದನ್ನು ವೈದ್ಯರು ಪತ್ತೆ ಹಚ್ಚಿದ್ದಾರೆ. ಯುವತಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆಕೆಯ ಆರೋಗ್ಯದ ಬಗ್ಗೆ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಪೋಚಾರಂ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಯುವಕನನ್ನು ವಶಕ್ಕೆ ಪಡೆದಿದ್ದಾರೆ. ಯುವಕನಿಗೆ ಸೋಂಕಿತ ರಕ್ತ ಹೇಗೆ ಸಿಕ್ಕಿತು?. ಘಟನೆಗೆ ನಿಖರ ಕಾರಣವೇನು? ಎಂಬುದು ಸೇರಿದಂತೆ ಇತರೆ ಅಂಶಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!