ಉದಯವಾಹಿನಿ, ಕುವೈತ್: ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧವು ಮೂರನೇ ವಾರಕ್ಕೆ ಕಾಲಿಟ್ಟಿದೆ. ಈ ಮಧ್ಯೆ ಇರಾನ್ ಹೊಸ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಎಲ್ಲಿದ್ದಾರೆ? ಹೇಗಿದ್ದಾರೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಆದರೆ ಈಗ ಮೊಜ್ತಬಾ ಖಮೇನಿ ರಷ್ಯಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂಬ ಸುದ್ದಿ ಪ್ರಕಟವಾಗಿದೆ. ಸಂಘರ್ಷ ಆರಂಭವಾದ ಮೊದಲ ದಿನ ಅಂದರೆ ಫೆ.28 ರಂದು ತಂದೆ ಅಯತೊಲ್ಲಾ ಅಲಿ ಖಮೇನಿ ಬಾಂಬ್ ದಾಳಿಯಲ್ಲಿ ಮೃತಪಟ್ಟಿದ್ದರು. ಈ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೊಜ್ತಬಾ ಖಮೇನಿ ಈಗ ಕೋಮಾಗೆ ಜಾರಿದ್ದಾರೆ ಎಂಬ ಸುದ್ದಿಗಳು ಬರುತ್ತಿದ್ದವು. ಆದರೆ ಈಗ ಅವರು ರಷ್ಯಾಗೆ ಹಾರಿದ್ದಾರೆ ಎಂಬ ವದಂತಿ ಹರಡಿದೆ.
ಕುವೈತ್‌ನಲ್ಲಿರುವ ಅಲ್-ಜರಿಡಾ ಪತ್ರಿಕೆ, ಅಮೆರಿಕ ಮತ್ತು ಇಸ್ರೇಲ್ ಖಮೇನಿ ಮನೆಗೆ ಬಾಂಬ್ ದಾಳಿ ನಡೆಸಿದ ಮರುದಿನ ಮೊಜ್ತಬಾ ಖಮೇನಿ ಅವರು ರಷ್ಯಾದ ಮಿಲಿಟರಿ ವಿಮಾನದಲ್ಲಿ ಮಾಸ್ಕೋಗೆ ತೆರಳಿದ್ದಾರೆ ಎಂದು ಇರಾನ್ ಸೇನಾ ಮೂಲಗಳನ್ನು ಆಧಾರಿಸಿ ವರದಿ ಮಾಡಿದೆ. ಮಾಸ್ಕೋಗೆ ಬಂದ ನಂತರ ಮೊಜ್ತಬಾ ಖಮೇನಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ನಿವಾಸದಲ್ಲಿರುವ ಖಾಸಗಿ ವೈದ್ಯಕೀಯ ಸೌಲಭ್ಯದಲ್ಲಿ ಅವರು ಈಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ಅಲ್-ಜರಿಡಾ ಪತ್ರಿಕೆ ಇರಾನ್ ನಾಯಕತ್ವದ ಜೊತೆಗಿನ ಸಂಬಂಧ ಬಹಳ ಚೆನ್ನಾಗಿದೆ. ಈ ಕಾರಣಕ್ಕೆ ಈಗ ಈ ಸುದ್ದಿ ತೀವ್ರ ಸಂಚಲನ ಮೂಡಿಸಿದೆ.
