ಉದಯವಾಹಿನಿ, ನೊಂಥಬುರಿ (ಥಾಯ್ಲೆಂಡ್​) : ಸಾವು ಅಂದ ಕೂಡಲೇ ಮೈ ಜುಂ ಎನ್ನುತ್ತದೆ. ಯಾವುದಾದರೂ ಅಪಾಯದಿಂದ ಪಾರಾದಾಗ ಹೇಳುವ ಮಾತು ‘ಸಾವಿನ ದವಡೆಯಿಂದ ಪಾರಾದೆ’ ಅಂತ. ಒಂದಲ್ಲಾ ಒಂದು ಸಾಯುತ್ತೇವೆ, ಸಾವು ನಿಶ್ಚಯ ಎಂದು ಗೊತ್ತಿದ್ದರೂ, ಅದರ ಕಲ್ಪನೆಯೇ ಭಯ ಹುಟ್ಟಿಸುತ್ತದೆ. ಆದರೆ, ಥೈಲ್ಯಾಂಡ್‌ನಲ್ಲಿ ಮಾತ್ರ ಕಥೆಯೇ ಬೇರೆ. ಇಲ್ಲಿ ಸಾವನ್ನು ಹಬ್ಬದಂತೆ ಸಂಭ್ರಮಿಸುತ್ತಾರೆ. ಬದುಕಿದ್ದಾಗಲೇ ಸಾವಿನ ಬಗ್ಗೆ ಯೋಜಿಸುವ ಮತ್ತು ಅವರನ್ನು ಅವಲಂಬಿಸಿದ ಜನರಿಗೆ ದಾರಿಯಾಗುವ ಬಗ್ಗೆ ಸಾವಿನ ಪೆಟ್ಟಿಗೆಯಲ್ಲಿ ಮಲಗಿ ಯೋಚಿಸುತ್ತಾರೆ.

ಥಾಯ್ಲೆಂಡ್​​ನಲ್ಲಿ ‘ಡೆತ್​ ಫೆಸ್ಟ್​’ (ಸಾವಿನ ಹಬ್ಬ) ಅನ್ನು ಆಯೋಜಿಸಲಾಗುತ್ತದೆ. ಈ ವಿಚಿತ್ರ ಆಚರಣೆಯಲ್ಲಿ ಜನರಿಗೆ ಭಾಗವಹಿಸಿ ಸಾವನ್ನು ಸಂಭ್ರಮಿಸುವ ಮತ್ತು ಅದರ ಬಗ್ಗೆ ಮುಕ್ತವಾಗಿ ಮಾತನಾಡುತ್ತಾರೆ. ಕಳೆದ ವರ್ಷದಿಂದ ಆರಂಭವಾಗಿರುವ ಈ ಹಬ್ಬ ಈಗ ನಡೆಯುತ್ತಿದೆ.

ಏನಿದು ಡೆತ್ ಫೆಸ್ಟ್? ಸತತ ಎರಡನೇ ವರ್ಷವೂ ಯಶಸ್ವಿಯಾಗಿ ನಡೆಯುತ್ತಿರುವ ಈ ಮೇಳದಲ್ಲಿ ಸಾವು ಕೇವಲ ಅಂತ್ಯವಲ್ಲ, ಅದೊಂದು ಸಿದ್ಧತೆ ಎಂಬ ಸಂದೇಶದೊಂದಿಗೆ ನಡೆಸಲಾಗುತ್ತಿದೆ. ಬೌದ್ಧ ಧರ್ಮದ ಪ್ರಮುಖ ಬೋಧನೆಗಳಾದ ಹುಟ್ಟು, ಸಾವು, ನೋವು ಮತ್ತು ಮುಪ್ಪಿನ ಬಗ್ಗೆ ಇಲ್ಲಿ ಜನರಿಗೆ ಅರಿವು ಮೂಡಿಸಲಾಗುತ್ತಿದೆ.

ಡೆತ್​ ಫೆಸ್ಟ್​ನ ವಿಶೇಷತೆಗಳು: ಈ ಹಬ್ಬವನ್ನು ವಿಶೇಷ ಕಾರಣಗಳನ್ನಿಟ್ಟುಕೊಂಡು ಆಚರಣೆ ಮಾಡಲಾಗುತ್ತಿದೆ. ಪ್ರತಿ ವರ್ಷ ನಡೆಸಲು ಉದ್ದೇಶಿಸಿರುವ ಡೆತ್​ ಫೆಸ್ಟ್​ ಹಲವು ವಿಶೇಷತೆಗಳನ್ನೂ ಹೊಂದಿದೆ. ಸಾವನ್ನು ಪರೀಕ್ಷಿಸಿ: ಇದರ ಅತ್ಯಂತ ಜನಪ್ರಿಯ ಚಟುವಟಿಕೆ ಎಂದರೆ ಶವಪೆಟ್ಟಿಗೆಯಲ್ಲಿ ಮಲಗುವುದು. ವಿವಿಧ ವಿನ್ಯಾಸದ ಶವಪೆಟ್ಟಿಗೆಗಳ ಒಳಗೆ ಜನರು ಮಲಗುತ್ತಾರೆ. ಮೇಲೆ ಅಳವಡಿಸಿರುವ ಕನ್ನಡಿಯ ಮೂಲಕ ತಮ್ಮನ್ನು ತಾವು ನೋಡಿಕೊಳ್ಳುತ್ತಾ ಜನರು ಸಾವಿನ ಕ್ಷಣವನ್ನು ಕಲ್ಪಿಸಿಕೊಳ್ಳುತ್ತಾರೆ. ತಾನು ಸತ್ತರೆ ಹೇಗಿರುತ್ತದೆ ಎಂಬುದನ್ನು ಅದರಲ್ಲಿ ಮಲಗಿ ಊಹೆ ಮಾಡಿಕೊಳ್ಳುತ್ತಾರೆ. ಅದೊಂಥರ ಸಮಾಧಿಯೋಗ. ಅಲ್ಲಿದ್ದಾಗ ತಾನು, ತನ್ನದು, ತನ್ನವರು ಎಂಬುದೆಲ್ಲವೂ ಅಳಿಯುವ ಕ್ಷಣ.

Leave a Reply

Your email address will not be published. Required fields are marked *

error: Content is protected !!