ಉದಯವಾಹಿನಿ, ಪ್ಯಾರಿಸ್, ಫ್ರಾನ್ಸ್: ಏಷ್ಯಾ ಮತ್ತು ಓಷಿಯಾನಿಯಾದಲ್ಲಿ ಇರುವ ತೈಲ ದಾಸ್ತಾನನ್ನು ತಕ್ಷಣ ಬಿಡುಗಡೆ ಮಾಡಲಾಗುವುದು ಎಂದು ಅಂತಾರಾಷ್ಟ್ರೀಯ ಇಂಧನ ಸಂಸ್ಥೆ ಭಾನುವಾರ ತಿಳಿಸಿದೆ. ಮಧ್ಯಪ್ರಾಚ್ಯದಲ್ಲಿ ಯುದ್ಧದಿಂದ ಉಂಟಾದ ಬೆಲೆಗಳ ಏರಿಕೆ ತಗ್ಗಿಸಲು ತೈಲ ದಾಸ್ತಾನುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು IEA ಸದಸ್ಯರು ಮಾರ್ಚ್ 11 ರಂದು ಒಪ್ಪಿಕೊಂಡಿದ್ದಾರೆ. ಸದಸ್ಯ ರಾಷ್ಟ್ರಗಳಿಂದ IEA ಗೆ ವೈಯಕ್ತಿಕ ಅನುಷ್ಠಾನ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಯೋಜನೆಗಳು ಏಷ್ಯಾ ಮತ್ತು ಓಷಿಯಾನಿಯಾದಲ್ಲಿ IEA ಸದಸ್ಯ ರಾಷ್ಟ್ರಗಳಿಂದ ತಕ್ಷಣವೇ ದಾಸ್ತಾನುಗಳು ಲಭ್ಯವಾಗಲಿವೆ ಎಂಬುದನ್ನು ಸೂಚಿಸುತ್ತಿವೆ ಎಂದು IEA ಹೇಳಿದೆ.
ಅಮೆರಿಕ ಮತ್ತು ಯುರೋಪ್‌ನಲ್ಲಿರುವ IEA ಸದಸ್ಯ ರಾಷ್ಟ್ರಗಳ ಷೇರುಗಳನ್ನು ಮಾರ್ಚ್ ಅಂತ್ಯದಿಂದ ಲಭ್ಯವಾಗುವಂತೆ ಮಾಡಲಾಗುವುದು ಎಂದು ಅದು ಹೇಳಿದೆ. ವಿಶ್ವಾದ್ಯಂತ ಒಟ್ಟು 271.7 ಮಿಲಿಯನ್ ಬ್ಯಾರೆಲ್‌ಗಳಷ್ಟು ಸರ್ಕಾರಿ – ನಿರ್ವಹಣೆಯ ದಾಸ್ತಾನುಗಳನ್ನು ಬಿಡುಗಡೆ ಮಾಡಲಾಗುವುದು ಎಂದು IEA ಇದೇ ವೇಳ ಪ್ರಕಟಿಸಿದೆ. ಮಧ್ಯಪ್ರಾಚ್ಯದಲ್ಲಿನ ಯುದ್ಧವು ಜಾಗತಿಕ ತೈಲ ಮಾರುಕಟ್ಟೆಯ ಇತಿಹಾಸದಲ್ಲಿ ಅತಿದೊಡ್ಡ ಪೂರೈಕೆ ಅಡಚಣೆ ಸೃಷ್ಟಿಸುತ್ತಿದೆ ಎಂದಿರುವ ಐಇಎ, ಈ ಅಡಚಣೆಯನ್ನು ನಿವಾರಿಸಲು ತುರ್ತು ದಾಸ್ತಾನು ಬಿಡುಗಡೆಗೆ ನಿರ್ಧರಿಸಲಾಗಿದೆ. ಜಾಗತಿಕ ಇಂಧನ ಸಂಸ್ಥೆಯ ಇತಿಹಾಸದಲ್ಲಿ ಆರನೇ ಬಾರಿಗೆ ಇಂತಹ ನಿರ್ಧಾರ ಕೈಗೊಳ್ಳಲಾಗಿದೆ. 2022 ರಲ್ಲಿ ರಷ್ಯಾ ಉಕ್ರೇನ್ ಆಕ್ರಮಿಸಿದ ನಂತರ ತೈಲ ದಾಸ್ತಾನನ್ನು ಮೊದಲ ಬಾರಿಗೆ ಬಿಡುಗಡೆ ಮಾಡಲಾಗುತ್ತಿದೆ. ಈಗಾಗಲೇ ಘೋಷಿಸಲಾದ ಬಿಡುಗಡೆಗಳು ತೈಲದ ಬೆಲೆಯ ಮೇಲೆ ಗಮನಾರ್ಹ ಪರಿಣಾಮ ಬೀರಿಲ್ಲ. ಪ್ರಸ್ತುತ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ $100 ರ ಆಸುಪಾಸಿನಲ್ಲಿದೆ. ಇದು 2022ರ ಬಳಿಕದ ಅತ್ಯಧಿಕ ದರವಾಗಿದೆ. ಯುದ್ಧ ಪ್ರಾರಂಭವಾಗುವ ಮೊದಲು ಬ್ಯಾರಲ್ ಗೆ 70 ಡಾಲರ್ ಗಿಂತ ಕಡಿಮೆ ಇತ್ತು.
ಫೆಬ್ರವರಿ 28 ರಂದು ಇರಾನ್ ಮೇಲೆ ಅಮೆರಿಕ – ಇಸ್ರೇಲ್ ಜಂಟಿ ದಾಳಿ ಆರಂಭಿಸಿದ್ದವು. ಇದರಿಂದಾಗಿ ಯುದ್ಧ ಆರಂಭವಾಗಿದೆ. ಯುದ್ಧ ಪ್ರಾರಂಭವಾದಾಗಿನಿಂದ ಇರಾನ್ ಬಹು ಪ್ರಾಮುಖ್ಯತೆ ಪಡೆದಿರುವ ಹಾರ್ಮುಜ್ ಜಲಸಂಧಿಯನ್ನು ಪರಿಣಾಮಕಾರಿಯಾಗಿ ನಿರ್ಬಂಧಿಸಿದೆ. ಹೀಗಾಗಿ ತೈಲ ಬೆಲೆ ಗಗನಕ್ಕೆ ಏರುತ್ತಿದೆ. ಇದು ಸಹಜ ಸ್ಥಿತಿಗೆ ಬರಬೇಕಾದರೆ, ಸಾಕಷ್ಟು ವಿಮಾ ಕಾರ್ಯವಿಧಾನಗಳು ಮತ್ತು ಸಾಗಣೆಗೆ ಭೌತಿಕ ರಕ್ಷಣೆ ಬೇಕಿದೆ ಎಂದು IEA ಹೇಳಿದೆ.
