ಉದಯವಾಹಿನಿ, ಟೆಹ್ರಾನ್ ಫೆಬ್ರವರಿ 28ರಂದು ಇಸ್ಲಾಮಿಕ್ ಗಣರಾಜ್ಯದ ಮೇಲೆ ಅಮೆರಿಕ-ಇಸ್ರೇಲ್ ಆರಂಭಿಸಿರುವ ಜಂಟಿ ಯುದ್ಧವು ಹದಿನಾರನೇ ದಿನಕ್ಕೆ ಕಾಲಿಟ್ಟಿದೆ. ಇರಾನ್ ತಮ್ಮತ್ತ ಮತ್ತೊಂದು ಸುತ್ತಿನ ಕ್ಷಿಪಣಿಗಳನ್ನು ಹಾರಿಸಿದೆ ಎಂದು ಇಸ್ರೇಲ್ ಸೇನೆ ಭಾನುವಾರ ಮುಂಜಾನೆ ತಿಳಿಸಿದೆ. ಮಧ್ಯಪ್ರಾಚ್ಯದ ಅತ್ಯಂತ ಜನನಿಬಿಡ ಬಂದರು ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಇತರ ಎರಡು ಬಂದರುಗಳಿಂದ ಜನರನ್ನು ಸ್ಥಳಾಂತರಿಸುವಂತೆ ಟೆಹ್ರಾನ್ ಶನಿವಾರ ಸೂಚಿಸಿತ್ತು.
ಇರಾನ್‌ನ ತೈಲ ರಫ್ತುಗಳನ್ನು ನಿರ್ವಹಿಸುವ ಮುಖ್ಯ ಟರ್ಮಿನಲ್ ಇರುವ ಖಾರ್ಗ್ ದ್ವೀಪದ ಮೇಲೆ ದಾಳಿಗೆ ಅಮೆರಿಕ ಯುಎಇಯಲ್ಲಿರುವ ಬಂದರುಗಳು, ಹಡಗುಕಟ್ಟೆಗಳು ಮತ್ತು ಅಡಗುತಾಣಗಳನ್ನು ಬಳಸಿಕೊಂಡಿದೆ ಎಂದು ಇರಾನ್ ಹೇಳಿದೆ. ಅಲ್ಲದೆ, ಅಮೆರಿಕದ ಪಡೆಗಳು ಆಶ್ರಯ ಪಡೆದಿವೆ ಎಂದು ಹೇಳಲಾದ ಪ್ರದೇಶಗಳನ್ನು ತೊರೆಯುವಂತೆ ಜನರಿಗೆ ಒತ್ತಾಯಿಸಿದೆ.
ಯುಎಇಯ ಎರಡು ಸ್ಥಳಗಳಾದ ರಾಸ್ ಅಲ್-ಖೈಮಾ ಮತ್ತು ದುಬೈಗೆ ಬಹಳ ಹತ್ತಿರವಿರುವ ಸ್ಥಳದಿಂದ ಅಮೆರಿಕ ಖಾರ್ಗ್ ದ್ವೀಪ ಮತ್ತು ಅಬು ಮುಸಾ ದ್ವೀಪದ ಮೇಲೆ ದಾಳಿ ಮಾಡಿದೆ ಎಂದು ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಆರೋಪಿಸಿದ್ದಾರೆ. ಇದು ಅಪಾಯಕಾರಿ ಎಂದಿರುವ ಅವರು, ಇರಾನ್ ಯಾವುದೇ ಜನನಿಬಿಡ ಪ್ರದೇಶದ ಮೇಲೆ ದಾಳಿ ಮಾಡದಂತೆ ಜಾಗರೂಕರಾಗಿರಲು ಯತ್ನಿಸುತ್ತದೆ. ನಮ್ಮ ವಿರೋಧಿಗಳು ಹಾಗೂ ಅವರ ಮಿತ್ರರಾಷ್ಟ್ರಗಳಿಗೆ ಮಾತ್ರ ಹಾರ್ಮುಜ್ ಜಲಸಂಧಿಯನ್ನು ಮುಚ್ಚಲಾಗಿದೆ ಎಂದು ಅರಾಘ್ಚಿ ತಿಳಿಸಿದ್ದಾರೆ.
ಕುವೈತ್ ವಿಮಾನ ನಿಲ್ದಾಣದ ಮೇಲೆ ಡ್ರೋನ್ ದಾಳಿ: ಶನಿವಾರ ಕುವೈತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಹಲವು ಡ್ರೋನ್ ದಾಳಿ ನಡೆದಿದ್ದು, ಅಲ್ಲಿನ ರಾಡಾರ್ ವ್ಯವಸ್ಥೆಗೆ ಹಾನಿಯಾಗಿದೆ. ಆದರೆ ಯಾರಿಗೂ ಗಾಯವಾಗಲಿಲ್ಲ ಎಂದು ದೇಶದ ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ.
ಇರಾನ್‌ನ ಇಸ್ಫಹಾನ್ ನಗರದಲ್ಲಿ 15 ಜನರು ಬಲಿ: ಮಧ್ಯ ಇರಾನ್‌ನ ಇಸ್ಫಹಾನ್ ನಗರದ ಕೈಗಾರಿಕಾ ಪ್ರದೇಶದಲ್ಲಿ ಶನಿವಾರ ನಡೆದ ದಾಳಿಯಲ್ಲಿ 15 ಜನರು ಸಾವನ್ನಪ್ಪಿದ್ದಾರೆ ಎಂದು ಇರಾನಿನ ಅರೆ-ಅಧಿಕೃತ ಸುದ್ದಿ ಸಂಸ್ಥೆಗಳಾದ ಫಾರ್ಸ್ ಮತ್ತು ಎಸ್‌ಎನ್‌ಎನ್ ತಿಳಿಸಿವೆ. ಇಸ್ರೇಲ್ ಸೇನೆಯು ಆ ಪ್ರದೇಶವನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಹೇಳಿದ್ದು, ಆದರೆ ಯುಎಸ್ ಸೇನೆಯು ಪ್ರತಿಕ್ರಿಯೆಗೆ ನಿರಾಕರಿಸಿದೆ.
ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲಿ ದಾಳಿಯಲ್ಲಿ ಐವರು ಸಾವು: ನಬತಿಯೆಹ್ ಜಿಲ್ಲೆಯಲ್ಲಿ ನಡೆದ ದಾಳಿಯಲ್ಲಿ ಒಂದು ಮಗು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು ಐದು ಜನರು ಗಾಯಗೊಂಡಿದ್ದಾರೆ ಎಂದು ಲೆಬನಾನ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ. ಮಾರ್ಜೆಯೂನ್ ಜಿಲ್ಲೆಯಲ್ಲಿ ನಡೆದ ಮತ್ತೊಂದು ದಾಳಿಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿ, ಇನ್ನೊಬ್ಬರು ಗಾಯಗೊಂಡಿದ್ದಾರೆ.
ಮಾರ್ಚ್ 2ರಂದು ಹಿಜ್ಬುಲ್ಲಾ ಉತ್ತರ ಇಸ್ರೇಲ್ ಕಡೆಗೆ ರಾಕೆಟ್ ದಾಳಿ ನಡೆಸಿದ ನಂತರ ಹಿಜ್ಬುಲ್ಲಾ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಮತ್ತೆ ಭುಗಿಲೆದ್ದಿದೆ. ಇಲ್ಲಿಯವರೆಗೆ, ಇಸ್ರೇಲಿ ದಾಳಿಯಲ್ಲಿ ಲೆಬನಾನ್‌ನಲ್ಲಿ 106 ಮಕ್ಕಳು ಮತ್ತು 65 ಮಹಿಳೆಯರು ಸೇರಿದಂತೆ 826 ಜನರು ಸಾವನ್ನಪ್ಪಿದ್ದಾರೆ. ಅಲ್ಲದೆ, 2009 ಜನರು ಗಾಯಗೊಂಡಿದ್ದಾರೆ ಎಂದು ಲೆಬನಾನ್ ಆರೋಗ್ಯ ಸಚಿವಾಲಯ ಹೇಳಿದೆ.
