ಉದಯವಾಹಿನಿ, ಶ್ರೀಕಾಕುಳಂ(ಆಂಧ್ರ ಪ್ರದೇಶ): ಬದಲಾದ ಜೀವನಶೈಲಿಯಿಂದ ಯುವಜನತೆ ಅನಾರೋಗ್ಯ ಸಮಸ್ಯೆಗೆ ತುತ್ತಾಗುತ್ತಿರುವುದು ಇಂದು ಸಾಮಾನ್ಯವಾಗುತ್ತಿದೆ. ಆದರೆ, ಆಂಧ್ರದ ಶ್ರೀಕಾಕುಳಂನ ವರಮ್ ಕಾಲೊನಿಯ ನಿವಾಸಿ ಅನೆಪು ಈಶ್ವರ ರಾವ್ ಅವರು ವಯಸ್ಸು 70 ದಾಟಿದರೂ ಆರೋಗ್ಯಯುತ ಜೀವನ ನಡೆಸುತ್ತಿದ್ದಾರೆ. ಬಿಸಿ ಹಾಸ್ಟೆಲ್ ಕಲ್ಯಾಣಾಧಿಕಾರಿಯಾಗಿ ನಿವೃತ್ತಿ ಹೊಂದಿರುವ ಇವರು, ತಮ್ಮ ಶಿಸ್ತುಬದ್ಧ ಜೀವನದಿಂದ ಅನೇಕರಿಗೆ ಮಾದರಿಯಾಗಿದ್ದಾರೆ.
ಕಳೆದ ಐದು ದಶಕದಿಂದ ತಮ್ಮ ದಿನಚರಿಯಲ್ಲಿ ಫಿಟ್ನೆಸ್ ಅನ್ನು ಮಂತ್ರವಾಗಿರಿಸಿರುವ ರಾವ್, ಒಂದು ದಿನವೂ ತಮ್ಮ ವ್ಯಾಯಾಮ ಚಟುವಟಿಕೆಯನ್ನು ತಪ್ಪಿಸಿದವರಲ್ಲ. ಸಣ್ಣ ಓಟ, ಅರ್ಧ ಗಂಟೆಯ ನಡಿಗೆ ಮತ್ತು ಸರಳ ವ್ಯಾಯಾಮ ಇಂದಿಗೂ ನನ್ನನ್ನು ಆರೋಗ್ಯವಾಗಿಸಿದೆ ಎನ್ನುತ್ತಾರೆ ರಾವ್. ಇಳಿ ವಯಸ್ಸಿನಲ್ಲೂ ಮುಂಜಾನೆ 5ಕ್ಕೆ ಎದ್ದು, ಸ್ಥಳೀಯ ಮೈದಾನದಲ್ಲಿ ಓಟ, ನಡಿಗೆ ಮಾಡುತ್ತಾರೆ. ಸಂಜೆ ಸ್ವಲ್ಪ ಹೊತ್ತು ಜಿಮ್‌ನಲ್ಲಿಯೂ ವ್ಯಾಯಾಮ ಮಾಡುತ್ತಾರೆ.
ತಮ್ಮ ಫಿಟ್ನೆಟ್ ತಯಾರಿ ಕಾಲೇಜು ದಿನಗಳಿಂದಲೇ ಆರಂಭವಾಗಿದೆ ಎನ್ನುವ ರಾವ್, “ಆರಂಭಿಕ ಜೀವನದಲ್ಲೇ ನಾನು ದೈಹಿಕ ಸದೃಢತೆಯ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದೆ. ರಾಜ್ಯಮಟ್ಟದಲ್ಲಿ ಮಿ.ಕಾಲೇಜ್ ಸ್ಪರ್ಧೆಯಲ್ಲಿ ಗೆದ್ದ ಬಳಿಕ ಸ್ಥಿರ ಅಭ್ಯಾಸ ಮುಂದುವರೆಸಿದೆ” ಎಂದು ಹೇಳುತ್ತಾರೆ. ದೈನಂದಿನ ವ್ಯಾಯಾಮಕ್ಕೆ ಮಾತ್ರ ರಾವ್ ಅಂಟಿಕೊಂಡಿಲ್ಲ. ಅನೇಕ ಕ್ರೀಡಾ ಸ್ಪರ್ಧೆಗಳಲ್ಲೂ ಭಾಗಿಯಾಗಿದ್ದಾಗಿ ಹೇಳಿದ್ದಾರೆ. 2017ರಿಂದ 2024ರ ವರೆಗೆ ವಿಶಾಖಪಟ್ಟಣಂ, ಮುಂಬೈ, ಬೆಂಗಳೂರು, ಕಾಕಿನಾಡ, ಗುಂಟೂರು, ತಿರುಪತಿ, ವಿಜಯವಾಡ ಮತ್ತು ಹೈದರಾಬಾದ್ನಲ್ಲಿ ನಡೆದ ಮ್ಯಾರಥಾನ್ನಲ್ಲೂ ಪಾಲ್ಗೊಂಡು, ಹಲವು ಪದಕಗಳನ್ನೂ ಗೆದ್ದಿದ್ದಾರೆ. 2024ರಲ್ಲಿ ಅನಂತಪುರದಲ್ಲಿ ನಡೆದ ರಾಜ್ಯಮಟ್ಟದ ಮಾಸ್ಟರ್ ಅಥ್ಲೆಟಿಕ್ ಚಾಂಪಿಯನ್ಶಿಪ್ನಲ್ಲಿ ಐದು ಕಿ.ಮೀ ನಡಿಗೆಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಅಲ್ಲದೇ 1,500 ಮೀಟರ್ ಓಟದ ಸ್ಪರ್ಧೆಯಲ್ಲಿ ಎರಡನೇ ಬಹುಮಾನ ಪಡೆದಿದ್ದಾರೆ. ವಯಸ್ಸು ಎಂಬುದು ಕೇವಲ ಸಂಖ್ಯೆ. ನೀವು ಶಿಸ್ತಿನ ಜೀವನ ಪಾಲನೆ ಮಾಡಿದಾಗ ನಿಮ್ಮ ದೇಹ ನಿಮಗೆ ಬೆಂಬಲ ನೀಡುತ್ತದೆ ಎಂಬುದು ರಾವ್ ಅವರ ಆತ್ಮವಿಶ್ವಾಸದ ನುಡಿ.
