ಉದಯವಾಹಿನಿ, ಅಲ್ವಾರ್(ರಾಜಸ್ಥಾನ): ದೇವರ ಮೇಲಿನ ಭಕ್ತನ ನಂಬಿಕೆ ಉತ್ತುಂಗಕ್ಕೇರಿದಾಗ ಆತ ಅಸಾಧಾರಣ ಕೆಲಸಗಳನ್ನೂ ಮಾಡಲು ಹೆದರುವುದಿಲ್ಲ. ರಾಜಸ್ಥಾನದ ಅಲ್ವಾರ್ ನಗರದಲ್ಲಿ ಇದಕ್ಕೊಂದು ಸೂಕ್ತ ಉದಾಹರಣೆ ಸಿಕ್ಕಿದೆ. ಇಲ್ಲಿನ ನಿತೇಶ್ (27) ಎಂಬ ಯುವಕ ಒಂದು ಸಾವಿರ ಕಬ್ಬಿಣದ ಮೊಳೆಗಳಿಂದ ನಿರ್ಮಿಸಿರುವ ಮರದ ಹಲಗೆಯ ಮೇಲೆ ಮಲಗಿ ಖಾತು ಶ್ಯಾಮ್ ನಗರಿಯಲ್ಲಿರುವ ಭಗವಾನ್ ಖಾತು ಶ್ಯಾಮ್‌ಗೆ ದಂಡಾವತ್ ಯಾತ್ರೆಗೆ ಹೊರಟಿದ್ದಾರೆ. ನಿತೇಶ್‌ ಅವರ ಈ ಯಾತ್ರೆ ಸುಮಾರು ಒಂದೂವರೆ ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಈ ಪ್ರಯಾಣದ ವೇಳೆ ನಿತೇಶ್ ಅವರೊಂದಿಗೆ ಅವರ ಸ್ನೇಹಿತರ ಗುಂಪು ಇರುತ್ತದೆ. ಇವರು ಯಾತ್ರೆಗೆ ಮುಂದಿನ ವ್ಯವಸ್ಥೆ ಮತ್ತು ಅಗತ್ಯಗಳನ್ನು ಅವಲಂಬಿಸಿ ಜತೆಯಾಗುತ್ತಾರೆ.
ನಿತೇಶ್ ಕಳೆದ ವರ್ಷ 501 ಮೊಳೆಗಳಿಂದ ನಿರ್ಮಿಸಿದ ಹಲಗೆಯ ಮೇಲೆ ಖಾತು ಶ್ಯಾಮ್ ನಗರಿಗೆ ದಂಡಾವತ್ ಯಾತ್ರೆ ಕೈಗೊಂಡಿದ್ದರು.

“ನನಗೆ ಖಾತು ಶ್ಯಾಮ್ ಬಗ್ಗೆ ಯಾವುದೇ ನಂಬಿಕೆ ಅಥವಾ ಭಕ್ತಿ ಇರಲಿಲ್ಲ. ಅದಕ್ಕೂ ಮೊದಲು ನಾನೆಂದಿಗೂ ಈ ದೇವಸ್ಥಾನಕ್ಕೆ ಭೇಟಿ ನೀಡಿರಲಿಲ್ಲ. ಆದರೆ ಐದು ವರ್ಷಗಳ ಹಿಂದೆ ನನ್ನ ಸ್ನೇಹಿತರೊಂದಿಗೆ ಪಾದಯಾತ್ರೆಯಲ್ಲಿ ಭಾಗವಹಿಸಿ ಖಾತು ನಗರ ತಲುಪಿದ್ದೆ. ಅಲ್ಲಿ ಬಾಬಾ ಶ್ಯಾಮ್ ಅವರ ದರ್ಶನ ಪಡೆದ ನಂತರ ನನ್ನ ಹೃದಯದಲ್ಲಿ ಖಾತು ಶ್ಯಾಮ್‌ ಅವರಲ್ಲಿ ಆಳವಾದ ನಂಬಿಕೆ ಹುಟ್ಟಿಕೊಂಡಿತು. ಆ ಕ್ಷಣದಿಂದ ನಾನು ಹಲವು ಬಾರಿ ದೇವಸ್ಥಾನಕ್ಕೆ ಭೇಟಿ ನೀಡಿದೆ. ಈಗ ಪ್ರತೀ ತಿಂಗಳು ಏಕಾದಶಿಯಂದು ಖಾತು ಶ್ಯಾಮ್‌ಗೆ ಹೋಗುತ್ತೇನೆ” ಎಂದು ನಿತೇಶ್ ತಿಳಿಸಿದರು.

“ಖಾತು ಶ್ಯಾಮ್ ಜೊತೆ ಬೆರೆತಾಗಿನಿಂದ ನನ್ನ ಮನಸ್ಸಿನಲ್ಲಿ ಸೇವೆ ಮತ್ತು ನಂಬಿಕೆಯ ಭಾವನೆಗಳು ಜಾಗೃತಗೊಂಡಿವೆ. ಕಳೆದ ವರ್ಷ ಮೊದಲ ಬಾರಿಗೆ ಮೊಳೆಯ ಹಲಗೆಯಲ್ಲಿ ದಂಡಾವತ್ ಯಾತ್ರೆ ಮಾಡಬೇಕೆಂದು ಅನಿಸಿತು. 501 ಮೊಳೆಗಳಿಂದ ಮಾಡಿದ ಹಲಗೆಯ ಸಹಾಯದಿಂದ ದಂಡಾವತ್ ಯಾತ್ರೆಯನ್ನು ಪ್ರಾರಂಭಿಸಿದೆ. ಅದು ಯಾವುದೇ ಸಮಸ್ಯೆಯಿಲ್ಲದೆ ಪೂರ್ಣಗೊಂಡಿತು. ಈ ವರ್ಷ 1 ಸಾವಿರ ಮೊಳೆಗಳಿಂದ ಮಾಡಿದ ಹಲಗೆಯ ಮೇಲೆ ಯಾತ್ರೆ ಪ್ರಾರಂಭಿಸಿದ್ದೇನೆ. ಇದು ಸುಮಾರು ಒಂದೂವರೆ ತಿಂಗಳಲ್ಲಿ ಪೂರ್ಣಗೊಳ್ಳುತ್ತದೆ” ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *

error: Content is protected !!