ಉದಯವಾಹಿನಿ, ಹೈದರಾಬಾದ್ (ತೆಲಂಗಾಣ): ಸಾಕು ಬೆಕ್ಕಿನ ಸಾವಿನ ನೋವು ತಾಳಲಾರದೇ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೈದರಾಬಾದ್ನ ರಂಗಾರೆಡ್ಡಿ ಜಿಲ್ಲೆಯ ಮೀರ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಬದಂಗ್‌ಪೇಟೆಯ ಅಂಜನಾದ್ರಿ ನಿವಾಸ್ ಕಾಲೋನಿಯ ಹಿಮಬಿಂದು(20) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಮೃತಳು ಪ್ರಥಮ ವರ್ಷದ ಪದವಿ ಓದುತ್ತಿದ್ದಳು. ಆಕೆಯ ಕುಟುಂಬ ಕೆಲವು ವರ್ಷಗಳ ಹಿಂದೆಯಷ್ಟೇ ತಾಡ್‌ಬಂಡ್‌ನಿಂದ ಅಂಜನಾದ್ರಿ ನಿವಾಸ್ ಕಾಲೋನಿಗೆ ಸ್ಥಳಾಂತರಗೊಂಡಿತ್ತು ಎಂದು ಸಬ್ – ಇನ್ಸ್‌ಪೆಕ್ಟರ್ ಸತ್ಯನಾರಾಯಣ ರೆಡ್ಡಿ ಮಾಹಿತಿ ನೀಡಿದ್ದಾರೆ.
ಹಿಮಬಿಂದು ತನ್ನ ಸಾಕು ಬೆಕ್ಕಿನ ಮೇಲೆ ಅಪಾರ ಒಲವು ಹೊಂದಿದ್ದಳು. ಕಳೆದ ಹಲವು ದಿನಗಳಿಂದ ಪ್ರೀತಿಯಿಂದ ಸಾಕಿಕೊಂಡು ಬರುತ್ತಿದ್ದಳು. ಹಾಗಾಗಿ ಬಹಳ ಹಚ್ಚಿಕೊಂಡಿದ್ದಳು. ಬುಧವಾರ ಮುಂಜಾನೆ ಬೆಕ್ಕು ಏಕಾಏಕಿ ಕಾಣೆಯಾಗಿತ್ತು. ತಮ್ಮ ಮನೆ, ಹಿತ್ತಲು ಸೇರಿದಂತೆ ಹಿಮಬಿಂದು ಬೆಕ್ಕನ್ನು ಎಲ್ಲೆಡೆ ಹುಡುಕಿದ್ದಳು. ಎಲ್ಲಿಯೂ ಸಿಕ್ಕಿರಲಿಲ್ಲ. ಅಪಾರ್ಟ್ಮೆಂಟ್ ನೆಲಮಾಳಿಗೆಗೆ ಹೋದಾಗ, ರಸ್ತೆಯಲ್ಲಿ ಬೆಕ್ಕು ಬಿದ್ದಿರುವುದನ್ನು ಹಿಮಬಿಂದು ಕಂಡಿದ್ದಳು. ಅದು ಸತ್ತಿದೆ ಎಂದು ಗೊತ್ತಾದ ಬಳಿಕ ಅವಳು ತುಂಬಾ ದುಃಖಿತಳಾಗಿದ್ದಳು.ಬೆಕ್ಕು ಸತ್ತ ನೋವನ್ನು ತಾಳಲಾರದೇ ವಿದ್ಯಾರ್ಥಿನಿ ಹಿಮಬಿಂದು ತನ್ನ ಮನೆಯಲ್ಲಿ ಇದ್ದ ಇಲಿ ಪಾಷಾಣವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯ ಸ್ಥಿತಿಯನ್ನು ಗಮನಿಸಿದ ತಾಯಿ ತಕ್ಷಣ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಚಿಕಿತ್ಸೆಯ ಹೊರತಾಗಿಯೂ, ಹಿಮಬಿಂದು ಮೃತಪಟ್ಟಿರುವ ಬಗ್ಗೆ ವೈದ್ಯರು ಖಚಿತಪಡಿಸಿದ್ದಾರೆ. ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಜನರಲ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಕುಟುಂಬ ಸದಸ್ಯರು ನೀಡಿದ ದೂರಿನ ಆಧಾರದ ಮೇಲೆ, ಅನುಮಾನಾಸ್ಪದ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ಸತ್ಯನಾರಾಯಣ ಮಾಹಿತಿ ನೀಡಿದ್ದಾರೆ.
