ಉದಯವಾಹಿನಿ, ಬಿಲಾಸ್ಪುರ, ಹಿಮಾಚಲ ಪ್ರದೇಶ: ಇಲ್ಲಿನ ಗೋಬಿಂದ್ ಸಾಗರ್ ಸರೋವರದ ದಡದಲ್ಲಿರುವ ಲುಹ್ನು ಎಂಬಲ್ಲಿ ಗುರುವಾರ ಬೆಳಗ್ಗೆ ಮಹಿಳೆಯೊಬ್ಬರು ಇದ್ದಕ್ಕಿದ್ದಂತೆ ಜೌಗು ಪ್ರದೇಶದಲ್ಲಿ ಸಿಲುಕಿಕೊಂಡಿದ್ದರು. ನೀರಿನಿಂದ ಹೊರಗೆ ಬಾರಲು ಆಗದೇ ಪ್ರಾಣಭಯದಲ್ಲಿದ್ದರು. ಮಹಿಳೆ ಸರೋವರದಲ್ಲಿರುವ ಮೀನುಗಳಿಗೆ ಆಹಾರ ನೀಡಲು ದಡಕ್ಕೆ ಹೋಗಿದ್ದರು. ಆದರೆ ಅವರ ಕಾಲು ಆಕಸ್ಮಿಕವಾಗಿ ಅಲ್ಲಿನ ಕೆಸರು ಮತ್ತು ಜೌಗು ಪ್ರದೇಶದಲ್ಲಿ ಸಿಲುಕಿಕೊಂಡಿತ್ತು. ಅವರು ನಿಧಾನವಾಗಿ ಜೌಗು ಪ್ರದೇಶದಲ್ಲಿ ಮುಳುಗಲು ಪ್ರಾರಂಭಿಸಿದರು. ಇದರಿಂದ ಭೀತಿಗೊಳಗಾದ ಅವರು ಕಾಪಾಡುವಂತೆ ಮನವಿ ಮಾಡಿದ್ದರು. ಅಂತಿಮವಾಗಿ ಇವರನ್ನು ಅಲ್ಲಿಂದ ಹೊರತರುವಲ್ಲಿ ಗೃಹರಕ್ಷಕದಳದ ಸಿಬ್ಬಂದಿ ಹಾಗೂ ರೈಲ್ವೆ ಸಿಬ್ಬಂದಿ ಯಶಸ್ವಿಯಾಗಿದೆ.

ಏನಿದು ಘಟನೆ?: ಸ್ಥಳೀಯರು ಹೇಳುವಂತೆ ಮಹಿಳೆ ಬೆಳಗ್ಗೆ ಎಂದಿನಂತೆ ಗೋಬಿಂದ್ ಸಾಗರ್ ಸರೋವರದ ದಡಕ್ಕೆ ತಲುಪಿದ್ದರು. ಬಹುತೇಕರು ಬೆಳಗ್ಗೆ ಸರೋವರದಲ್ಲಿರುವ ಮೀನುಗಳಿಗೆ ಆಹಾರ ನೀಡಲು ಮತ್ತು ಪೂಜೆ ಮಾಡಲು ಇಲ್ಲಿಗೆ ಬರುತ್ತಾರೆ. ಮಹಿಳೆ ಅದೇ ಉದ್ದೇಶಕ್ಕಾಗಿ ಸರೋವರವನ್ನು ತಲುಪಿದ್ದರು. ಅವರು ಸರೋವರದ ಅಂಚಿಗೆ ತಲುಪಿದಾಗ, ಜೌಗು ಪ್ರದೇಶದಲ್ಲಿ ಸಮತೋಲನವನ್ನು ಕಳೆದುಕೊಂಡು ಸಿಕ್ಕಿಬಿದ್ದಿದ್ದರು. ಜೀವ ಭೀತಿಯಲ್ಲಿದ್ದ ಅವರು ರಕ್ಷಿಸುವಂತೆ ಕಿರುಚಾಡುತ್ತಿದ್ದರು.

ಆ ಸಮಯದಲ್ಲಿ ಸುತ್ತಮುತ್ತ ಹೆಚ್ಚು ಜನರಿರಲಿಲ್ಲ. ಆದರೆ, ಹತ್ತಿರದ ರೈಲ್ವೆ ಮಾರ್ಗದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಮಹಿಳೆಯ ಕಿರುಚಾಟವನ್ನು ಗಮನಿಸಿದರು. ಆಕೆಯ ಧ್ವನಿ ಕೇಳಿದ ಕಾರ್ಮಿಕರು ತಕ್ಷಣ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಸಮಯ ವ್ಯರ್ಥ ಮಾಡದೇ ಆಕೆಯನ್ನು ರಕ್ಷಣೆ ಮುಂದಾದರು. ತಕ್ಷಣವೇ ಗೃಹರಕ್ಷಕ ದಳದ ಬೆಟಾಲಿಯನ್‌ಗೆ ಸಹ ಮಾಹಿತಿ ನೀಡಿದರು. ಸರೋವರದ ದಡದಲ್ಲಿರುವ ಜೌಗು ಪ್ರದೇಶವು ತುಂಬಾ ಆಳವಾಗಿದ್ದರಿಂದ ಕಾರ್ಮಿಕರು ಅದನ್ನು ನೇರವಾಗಿ ತಲುಪಲು ಬಹಳ ಕಷ್ಟಪಡಬೇಕಾಯಿತು. ಗೃಹರಕ್ಷಕ ದಳದ ಸಿಬ್ಬಂದಿ ಮತ್ತು ರೈಲ್ವೆ ನೌಕರರು ಸ್ಥಳಕ್ಕೆ ಧಾವಿಸಿದರು.ರೈಲ್ವೆ ನಿರ್ಮಾಣದಲ್ಲಿ ತೊಡಗಿರುವ ಭಾರೀ ಯಂತ್ರೋಪಕರಣಗಳ ಸಹಾಯದಿಂದ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದರು.

ಕೆಲವು ಉದ್ಯೋಗಿಗಳು ಧೈರ್ಯ ತೋರಿಸಿ ಮಹಿಳೆ ಇದ್ದಲ್ಲಿಗೆ ತೆರಳಿ ಸಾಕಷ್ಟು ಪ್ರಯತ್ನದ ನಂತರ ಮಹಿಳೆಯನ್ನು ಸುರಕ್ಷಿತವಾಗಿ ಹೊರಗೆ ಕರೆತರುವಲ್ಲಿ ಯಶಸ್ವಿಯಾದರು. ಮಹಿಳೆಯನ್ನು ಜೌಗು ಪ್ರದೇಶದಿಂದ ಹೊರತೆಗೆದಾಗ ಅಲ್ಲಿದ್ದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಮಹಿಳೆಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ ಮತ್ತು ಅವರು ಸುರಕ್ಷಿತವಾಗಿದ್ದಾರೆ ಎಂಬುದು ಅಲ್ಲಿದ್ದವರು ನಿಟ್ಟುಸಿರು ಬಿಡುವಂತೆ ಮಾಡಿತು ಎಂದು ಬಿಲಾಸ್ಪುರ ಎಸ್ಪಿ ಸಂದೀಪ್ ಧವನ್ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!