ಉದಯವಾಹಿನಿ, ಚೆನ್ನೈ (ತಮಿಳುನಾಡು): ಎಐಎಡಿಎಂಕೆ ಜೊತೆಗೆ ಮೈತ್ರಿ ಮೂಲಕ ತಮಿಳುನಾಡು ವಿಧಾನಸಭೆಯ ಚುನಾವಣೆ ಎದುರಿಸಲು ಸಜ್ಜಾಗಿರುವ ಬಿಜೆಪಿ ಸೀಟು ಹಂಚಿಕೆಯ ಮಾತುಕತೆಯನ್ನು ಅಂತಿಮಗೊಳಿಸಿದೆ.ಸುದೀರ್ಘ ಮಾತುಕತೆ ಬಳಿಕ ಎನ್​ಡಿಎ ಸೀಟು ಹಂಚಿಕೆ ಒಪ್ಪಂದ ಅಂತ್ಯವಾಗಿದ್ದು, ಅಖಿಲ ಭಾರತ ಅಣ್ಣ ದ್ರಾವಿಡ ಮುನ್ನೇತ್ರಂ ಕಳಗಂ (ಎಐಎಡಿಎಂಕೆ) 178 ಸ್ಥಾನದಲ್ಲಿ ಸ್ಪರ್ಧಿಸಿದರೆ, ಭಾರತೀಯ ಜನತಾ ಪಕ್ಷ 27, ಪಟ್ಟಲಿ ಮಕ್ಕಳ್​ ಕಚ್ಚಿ 18 ಸ್ಥಾನ ಮತ್ತು ಅಮ್ಮ ಮಕ್ಕಳ್​ ಮುನ್ನೇತ್ರ ಕಳಗಂ 11 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ.

ಚೆನ್ನೈನ ಪಕ್ಷದ ಮುಖ್ಯ ಕಚೇರಿಯಲ್ಲಿ ನಡೆದ ಜಂಟಿ ಮಾಧ್ಯಮಗೋಷ್ಟಿಯಲ್ಲಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಈ ಘೋಷಣೆ ಮಾಡಿದ್ದಾರೆ. ಈ ವೇಳೆ ತಮಿಳುನಾಡು ಬಿಜೆಪಿ ಚುನಾವಣಾ ಉಸ್ತುವಾರಿ ಪಿಯೂಷ್ ಗೋಯಲ್​, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್, ಪಿಎಂಕೆ ಅಧ್ಯಕ್ಷ ಅನ್ಬುಮಣಿ ರಾಮದಾಸ್ ಮತ್ತು ಎಎಂಎಂಕೆ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಹಾಜರಿದ್ದರು.

ಪ್ರತ್ಯೇಕವಾಗಿ ಮಾತನಾಡಿದ ಪುಥಿಯಾ ನೀಧಿ ಕಚ್ಚಿಯ ಸಂಸ್ಥಾಪಕ ಎ.ಸಿ. ಷಣ್ಮುಗಂ, ಬಿಜೆಪಿಯ ಕಮಲದ ಚಿಹ್ನೆಯಡಿಯಲ್ಲಿ ಒಂಬತ್ತು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ತಮ್ಮ ಪಕ್ಷದ ಇಚ್ಛೆಯನ್ನು ಪಿಯೂಷ್ ಗೋಯಲ್ ಅವರಿಗೆ ತಿಳಿಸಿರುವುದಾಗಿ ಹೇಳಿದ್ದಾರೆ. ಈ ಹಿಂದಿನ ಚುನಾವಣೆಯ ಕುರಿತು ಹೇಳಿದ ಅವರು 2014ರಲ್ಲಿ ವೆಲ್ಲೂರಿನಲ್ಲಿ ಬಿಜೆಪಿ ಚಿಹ್ನೆಯಡಿಯಲ್ಲಿ 3.25 ಲಕ್ಷ ಮತಗಳನ್ನು ಮತ್ತು ಎಐಎಡಿಎಂಕೆ ಬೆಂಬಲದೊಂದಿಗೆ ಸ್ಪರ್ಧಿಸಿದಾಗ 4.70 ಲಕ್ಷ ಮತಗಳನ್ನು ಪಡೆದಿದ್ದಾಗಿ ಹೇಳಿದರು.

ರಾಜ್ಯದಲ್ಲಿ ಎನ್​ಡಿಎ ನೇತೃತ್ವವನ್ನು ಎಐಎಡಿಎಂಕೆ ವಹಿಸಲಿದೆ. ಮೈತ್ರಿಕೂಟದಲ್ಲಿ ಬಿಜೆಪಿ, ಪಿಎಂಕೆ (ಅನ್ಬುಮಣಿ ಬಣ), ಎಎಂಎಂಕೆ ಮತ್ತು ಮಾಜಿ ಕೇಂದ್ರ ಸಚಿವ ತಮಿಳ್ ಮಾನಿಲಾ ಕಾಂಗ್ರೆಸ್ (ಟಿಎಂಸಿ-ಎಂ) ಪಕ್ಷಗಳಿವೆ.ಎಪ್ರಿಲ್​ 23ರಂದು ಒಂದೇ ಹಂತದ ಚುನಾವಣೆಯನ್ನು ತಮಿಳುನಾಡು ಎದುರಿಸಲಿದ್ದು, ಮತ ಎಣಿಕೆ ಕಾರ್ಯ ಮೇ 4ರಂದು ನಡೆದು ಫಲಿತಾಂಶ ಹೊರ ಬೀಳಲಿದೆ. 234 ಸದಸ್ಯ ಬಲ ಹೊಂದಿರುವ ತಮಿಳುನಾಡು ವಿಧಾನಸಭೆ ಅವಧಿ ಮೇ 10ಕ್ಕೆ ಮುಕ್ತಾಯವಾಗಲಿದೆ. ತಮಿಳುನಾಡು ಚುನಾವಣೆಯಲ್ಲಿ ಎಐಎಡಿಎಂಕೆಗೆ ಡಿಎಂಕೆ ಪ್ರಮುಖ ಎದುರಾಳಿಯಾಗಿದ್ದು, ಅದು ಕಾಂಗ್ರೆಸ್​ ಸೇರಿದಂತೆ ಇತರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದೆ. ಈ ಮೈತ್ರಿಯ ಸೀಟು ಹಂಚಿಕೆ ಇನ್ನಷ್ಟೇ ಅಂತಿಮಗೊಳ್ಳಬೇಕಿದೆ.ಇನ್ನು ನಟ ವಿಜಯ್​ ಅವರ ಸಂಸ್ಥಾಪನೆಯ ಟಿವಿಕೆ ಕೂಡ ಈ ಬಾರಿ ಚುನಾವಣಾ ಕಣದಲ್ಲಿದ್ದು, ಪಕ್ಷವು ಸ್ವತಂತ್ರವಾಗಿ ಚುನಾವಣೆ ಎದುರಿಸುವುದಾಗಿ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!