ಉದಯವಾಹಿನಿ, ವಿಶಾಖಪಟ್ಟಣ(ಆಂಧ್ರ ಪ್ರದೇಶ): ವಾಯುಭಾರ ಕುಸಿತದ ಪರಿಣಾಮ ಇಂದಿನಿಂದ (ಸೋಮವಾರ) ಮುಂದಿನ ನಾಲ್ಕು ದಿನಗಳವರೆಗೆ ಆಂಧ್ರಪ್ರದೇಶದ ವಿವಿಧೆಡೆ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ.
ಶ್ರೀಕಾಕುಳಂ, ವಿಜಯನಗರ, ಪಾರ್ವತಿಪುರಂ ಮಾನ್ಯಂ, ಅಲ್ಲೂರಿ ಸೀತಾರಾಮರಾಜು, ಪೊಲಾವರಂ, ವಿಶಾಖಪಟ್ಟಣಂ, ಅನಕಾಪಲ್ಲಿ, ಕಾಕಿನಾಡ, ಕೋನಸೀಮ, ಪೂರ್ವ ಗೋದಾವರಿ, ಪಶ್ಚಿಮ ಗೋದಾವರಿ, ಏಲೂರು ಜಿಲ್ಲೆಗಳ ಎನ್‌ಟಿಆರ್‌ ಹಾಗೂ ಏಲೂರು ಸುತ್ತಮುತ್ತಲಿನ ಕೆಲವೆಡೆ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಂಭವವಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಎಚ್ಚರಿಕೆ ನೀಡಿದೆ.
ಅದೇ ರೀತಿ, ಬಾಪಟ್ಲಾ, ಪಲ್ನಾಡು, ಮಾರ್ಕಪುರಂ, ಪ್ರಕಾಶಂ ಮತ್ತು ನೆಲ್ಲೂರು ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಹಗುರ ಮಳೆಯಾಗುವ ಸಾಧ್ಯತೆಯಿದೆ. ಮಳೆ ಬೀಳುವ ವೇಳೆ ಹೊಲ-ಗದ್ದೆಗಳಲ್ಲಿ, ತೆರೆದ ಸ್ಥಳಗಳಲ್ಲಿ ಹಾಗೂ ಮರಗಳ ಕೆಳಗೆ ನಿಲ್ಲದಂತೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಸಾರ್ವಜನಿಕರಲ್ಲಿ ಸೂಚನೆ ನೀಡಿದೆ.

ಮಳೆ ಮುನ್ಸೂಚನೆ: ಗಂಟೆಗೆ ಸುಮಾರು 50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ರಾಜ್ಯಾದ್ಯಂತ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿಗಳಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಅಮರಾವತಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭಾನುವಾರ, ಪೋಲಾವರಂ, ಎಲೂರು, ಕಾಕಿನಾಡ, ಕೃಷ್ಣ, ಪ್ರಕಾಶಂ, ಅನಕಪಲ್ಲಿ, ವಿಶಾಖಪಟ್ಟಣ ಮತ್ತು ಇತರ ಜಿಲ್ಲೆಗಳಲ್ಲಿ ಮಳೆಯಾಗಿದೆ ಅಂತಲೂ ತಿಳಿಸಿದೆ.

ಭಾರಿ ಪ್ರಮಾಣದ ಬೆಳೆ ಹಾನಿ: ಇತ್ತೀಚೆಗೆ ಸುರಿದ ಅಕಾಲಿಕ ಆಲಿಕಲ್ಲು ಮಳೆಯಿಂದ ಭತ್ತ, ಹತ್ತಿ ಸೇರಿದಂತೆ ಇತರ ಬೆಳೆಗಳು ಹಾನಿಯಾಗಿದ್ದು, ರೈತರು ನಷ್ಟಕ್ಕೊಳಗಾಗಿದ್ದಾರೆ. ಕೆಲವು ಹಳ್ಳಿಗಳಲ್ಲಿ ಬಿದ್ದ ಅಕಾಲಿಕ ಮಳೆಯಿಂದಾಗಿ ಸುಮಾರು 2,300 ಎಕರೆ ಪ್ರದೇಶದಲ್ಲಿ ಭತ್ತದ ಬೆಳೆ ಮತ್ತು 350 ಎಕರೆ ಪ್ರದೇಶದಲ್ಲಿ ಹತ್ತಿ ಬೆಳೆ ಹಾನಿಯಾಗಿದೆ ಎಂದು ಕೃಷಿ ಅಧಿಕಾರಿಗಳು ಅಂದಾಜು ಮಾಡಿದ್ದಾರೆ.

ಸಿಡಿಲು ಬಡಿದು ವ್ಯಕ್ತಿ ಸಾವು: ನಾಲ್ಕು ದಿನಗಳ ಹಿಂದೆ ಸಿಡಿಲು ಬಡಿದು ರಾಜಮಂಡ್ರಿಯ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿತ್ತು. ತುಳ್ಳೂರಿನ ಶಾಲೆಯಿಂದ ಮಗಳನ್ನು ಕರೆದುಕೊಂಡು ಬರುತ್ತಿದ್ದಾಗ ಸಿಡಿಲು ಬಡಿದು ಶ್ರೀನಿವಾಸ್ ಸ್ಥಳದಲ್ಲೇ ಮೃತಪಟ್ಟಿದ್ದು, ಬಿಎಸ್‌ಐಆರ್‌ ಎಂಬ ಕಂಪನಿಯಲ್ಲಿ ಸರ್ವೇಯರ್ ಆಗಿ ಕೆಲಸ ಮಾಡುತ್ತಿದ್ದರು.

Leave a Reply

Your email address will not be published. Required fields are marked *

error: Content is protected !!