ಉದಯವಾಹಿನಿ, ನ್ಯೂಯಾರ್ಕ್(ಯುಎಸ್‌ಎ)​:   ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್​ ಆದ ಏರ್​ ಕೆನಡಾ ವಿಮಾನ, ಬಂದರು ಪ್ರಾಧಿಕಾರದ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಕನಿಷ್ಠ 100 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಹಲವರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್​ ಪೊಲೀಸ್​ ಇಲಾಖೆ ವಿಮಾನ ಡಿಕ್ಕಿಯಾಗಿರುವ ಬಗ್ಗೆ ದೃಢಪಡಿಸಿದೆ. ಆದರೆ ಈ ಬಗ್ಗೆ ತಕ್ಷಣಕ್ಕೆ ಹೆಚ್ಚುವರಿ ಮಾಹಿತಿಯನ್ನು ನೀಡಿಲ್ಲ. ರಾತ್ರಿ 11.38ಕ್ಕೆ ರನ್​ವೇಯಲ್ಲಿ ವಿಮಾನ ವಾಹನಕ್ಕೆ ಡಿಕ್ಕಿ ಹೊಡೆದಿರುವುದಾಗಿ ವರದಿಯಾಗಿದೆ. ತಕ್ಷಣ ಅಗ್ನಿಶಾಮಕ ದಳ ಪ್ರತಿಕ್ರಿಯಿಸಿದೆ ಎಂದು ನ್ಯೂಯಾರ್ಕ್​ ನಗರದ ಅಗ್ನಿಶಾಮಕ ಇಲಾಖೆ ವಕ್ತಾರರು ತಿಳಿಸಿದ್ದಾರೆ. ವಿಮಾನದ ಮುಂಭಾಗಕ್ಕೆ ತೀವ್ರ ಹಾನಿಯಾಗಿರುವ ಹಲವಾರು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್​ ಆಗುತ್ತಿವೆ. ಸ್ಥಳದಲ್ಲಿದ್ದವರು ಸೆರೆ ಹಿಡಿದಿರುವ ವಿಡಿಯೋಗಳಲ್ಲಿ ವಿಮಾನವು ತೀವ್ರವಾಗಿ ಹಾನಿಗೊಳಗಾಗಿರುವುದನ್ನು ಗಮನಿಸಬಹುದು. ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್‌ನ ನ್ಯಾಷನಲ್ ಏರ್‌ಸ್ಪೇಸ್ ಸಿಸ್ಟಮ್ ವೆಬ್‌ಸೈಟ್, ಲಾಗಾರ್ಡಿಯಾ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ ಎಂದು ವರದಿ ಮಾಡಿದೆ. ಸೋಮವಾರ ಮುಂಜಾನೆ ಲಾಗಾರ್ಡಿಯಾದಿಂದ ಹೊರಡುವ ಎಲ್ಲಾ ವಿಮಾನಗಳು ವಿಳಂಬವಾಗಿವೆ ಅಥವಾ ರದ್ದಾಗಿವೆ ಎಂದು ವಿಮಾನ ನಿಲ್ದಾಣದ ವೆಬ್‌ಸೈಟ್​ನಲ್ಲಿ ಹೇಳಲಾಗಿದೆ.

ಏರ್ ಕೆನಡಾ ಎಕ್ಸ್‌ಪ್ರೆಸ್ ವಿಮಾನ ಲ್ಯಾಂಡಿಂಗ್ ಆಗುವಾಗ ವಿಮಾನ ನಿಲ್ದಾಣದ ರಕ್ಷಣಾ ಮತ್ತು ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ವಿಮಾನ ಟ್ರ್ಯಾಕಿಂಗ್ ಪ್ಲಾಟ್‌ಫಾರ್ಮ್ 24 ಹೇಳಿದೆ. ಏರ್ ಕೆನಡಾದ ಪ್ರಾದೇಶಿಕ ಪಾಲುದಾರ ಜಾಝ್ ಏವಿಯೇಷನ್ ​​ನಿರ್ವಹಿಸುವ CRJ-900 ವಿಮಾನ ಮಾಂಟ್ರಿಯಲ್‌ನಿಂದ ಹೊರಟು ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಇಳಿದಿತ್ತು ಎಂದು ವೆಬ್​ಸೈಟ್​ ಹೇಳಿದೆ.

ಫ್ಲೈಟ್‌ರಾಡರ್ 24 ಪ್ರಕಾರ, ವಿಮಾನ ರನ್​ವೇನಲ್ಲಿನ ಸಾಗುತ್ತಿದ್ದ ವೇಳೆ, ವಾಹನ ತನ್ನ ಮಾರ್ಗದಿಂದ ತಪ್ಪಿ ಬಂದಿದೆ. ಆಗ ವಿಮಾನ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಏರ್ ಕೆನಡಾ ವಿಮಾನದ ಮುಂಭಾಗ ಹಾಗೂ ಕಾಕ್‌ಪಿಟ್ ಪ್ರದೇಶ ತೀವ್ರವಾಗಿ ಹಾನಿಗೊಳಗಾಗಿದೆ. ಅಪಘಾತ ಸಂಭವಿಸಿದ ತಕ್ಷಣವೇ ತುರ್ತು ವಾಹನಗಳು ಸ್ಥಳಕ್ಕಾಗಮಿಸಿವೆ.

Leave a Reply

Your email address will not be published. Required fields are marked *

error: Content is protected !!