ಉದಯವಾಹಿನಿ, ಗುವಾಹಟಿ(ಅಸ್ಸಾಂ): ಅಸ್ಸಾಂ ಬಿಜೆಪಿ ಸರ್ಕಾರದ ಸಚಿವೆ ನಂದಿತಾ ಗರ್ಲೋಸಾ ಅವರು ಭಾನುವಾರ ಕಾಂಗ್ರೆಸ್ ಸೇರಿ ಅಚ್ಚರಿ ಮೂಡಿಸಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ನಂದಿತಾ ಕಾಂಗ್ರೆಸ್ ಅಭ್ಯರ್ಥಿಯಾಗಿ ದಿಮಾ ಹಸಾವೊ ಜಿಲ್ಲೆಯ ಹಫ್ಲಾಂಗ್ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.
ಗಾರ್ಲೋಸಾ ಅವರು ಹಾಫ್ಲೋಂಗ್‌ನಲ್ಲಿ ಪಕ್ಷ ಸೇರುತ್ತಿರುವ ಫೋಟೋವನ್ನು ಅಸ್ಸಾಂ ಕಾಂಗ್ರೆಸ್ ಮಾಧ್ಯಮ ವಿಭಾಗ ಶೇರ್ ಮಾಡಿದೆ.
ನಂದಿತಾ ಗರ್ಲೋಸಾ ಅವರು ಕಾಂಗ್ರೆಸ್ ಸೇರಿದ್ದಾರೆ ಎಂಬುದನ್ನು ಘೋಷಣೆ ಮಾಡಲು ನಮಗೆ ಸಂತೋಷವಾಗಿದೆ. ಅವರು ಕಳೆದ ಐದು ವರ್ಷಗಳಿಂದ ದಿಮಾ ಹಸಾವೊ ಜನರ ಧ್ವನಿಯಾಗಿದ್ದಾರೆ. ಯಾವಾಗಲೂ ತಮ್ಮ ನಂಬಿಕೆ ಮತ್ತು ತತ್ವಗಳಿಗಾಗಿ ನಿಂತವರು ಎಂದು ಕಾಂಗ್ರೆಸ್ ಹೇಳಿಕೆಯಲ್ಲಿ ಉಲ್ಲೇಖಿಸಿದೆ.
ರಾಜ್ಯ ಕ್ರೀಡಾ ಮತ್ತು ಯುವ ಕಲ್ಯಾಣ ಖಾತೆ ಸಚಿವರಾಗಿದ್ದ ನಂದಿತಾ ಬಿಜೆಪಿಯಲ್ಲಿ ಇದಕ್ಕಾಗಿಯೇ ಬೆಲೆ ತೆರಬೇಕಾಯಿತು. ಹಿಮಂತ ಬಿಸ್ವಾ ಶರ್ಮಾ ಬುಡಕಟ್ಟು ಜನಾಂಗದವರ ಭೂಮಿಯನ್ನು ದೊಡ್ಡ ನಿಗಮಗಳಿಗೆ ಮಾರಾಟ ಮಾಡುವಲ್ಲಿ ಮಾತ್ರ ಆಸಕ್ತಿ ಹೊಂದಿದ್ದಾರೆ ಎಂದು ಕಾಂಗ್ರೆಸ್ ಇದೇ ವೇಳೆ ಟೀಕಿಸಿದೆ.
ಕಾಂಗ್ರೆಸ್ ಈ ಹಿಂದೆ ತನ್ನ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ನಿರ್ಮಲ್ ಲ್ಯಾಂಗ್ಥಾಸಾ ಅವರನ್ನು ಹಫ್ಲಾಂಗ್ ಕ್ಷೇತ್ರದಿಂದ ಕಣಕ್ಕಿಳಿಸಿತ್ತು. ಆದರೆ ಅವರು ಇದೀಗ ಗಾರ್ಲೋಸಾ ಅವರಿಗೆ ತಮ್ಮ ಕ್ಷೇತ್ರ ಬಿಟ್ಟು ಕೊಡಲು ಒಪ್ಪಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.
ಹೊಸ ಮುಖಕ್ಕೆ ಮಣೆ ಹಾಕಿದ ಬಿಜೆಪಿ: ನಂದಿತಾ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಫ್ಲಾಂಗ್ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಈ ಕ್ಷೇತ್ರದಿಂದ ಮುಂಬರುವ ಚುನಾವಣೆಗೆ ಬಿಜೆಪಿ ಇವರ ಬದಲು ಇದೇ ಮೊದಲ ಬಾರಿಗೆ ಸ್ಪರ್ಧಿಸುತ್ತಿರುವ ರೂಪಾಲಿ ಲ್ಯಾಂಗ್ಥಾಸಾ ಅವರನ್ನು ಆಯ್ಕೆ ಮಾಡಿದೆ.
ಫಲ ನೀಡದ ಸಿಎಂ ಶರ್ಮಾ ಮನವೊಲಿಕೆ: ಮುಖ್ಯಮಂತ್ರಿ ಹಿಮಂತ ಶರ್ಮಾ ಭಾನುವಾರ ಹಾಫ್ಲೋಂಗ್‌ನಲ್ಲಿರುವ ಗಾರ್ಲೋಸಾ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಆದರೆ, ಈ ಮಾತುಕತೆಯ ಫಲಿತಾಂಶದ ಬಗ್ಗೆ ಶರ್ಮಾ ಮತ್ತು ಸಚಿವೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.
ಏ.9ರಂದು ಅಸ್ಸಾಂ ಚುನಾವಣೆ: 126 ಸದಸ್ಯ ಬಲದ ಅಸ್ಸಾಂ ವಿಧಾನಸಭಾ ಚುನಾವಣೆಗೆ ಏಪ್ರಿಲ್ 9ರಂದು ಮತದಾನ ನಡೆಯಲಿದೆ. ಮೇ 4ರಂದು ಮತಗಳ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ.
