ಉದಯವಾಹಿನಿ, ಬೆಂಗಳೂರು: ಶಿವಮೊಗ್ಗದ ತ್ಯಾವರೆಕೊಪ್ಪ ಮೃಗಾಲಯದಲ್ಲಿ ನೀರಾನೆ ದಾಳಿಯಿಂದ ಮೃತಪಟ್ಟ ಯುವ ಪಶುವೈದ್ಯೆ ಡಾ.ಸಮೀಕ್ಷಾ ರೆಡ್ಡಿ ಸಾವಿಗೆ ನ್ಯಾಯ ದೊರಕಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಬಿ ಖಂಡ್ರೆ ಕುಟುಂಬದವರಿಗೆ ಆಶ್ವಾಸನೆ ನೀಡಿದ್ದಾರೆ.
ಆನೇಕಲ್ ಬಳಿಯ ಸಕಲವಾರದಲ್ಲಿರುವ ಡಾ.ಸಮೀಕ್ಷಾ ರೆಡ್ಡಿ ಅವರ ನಿವಾಸಕ್ಕೆ ತೆರಳಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಇದೊಂದು ಅತ್ಯಂತ ನೋವಿನ ಸಂಗತಿ. ಸರ್ಕಾರ ಈ ನೋವಿನ ಸಂದರ್ಭದಲ್ಲಿ ಕುಟುಂಬದೊಂದಿಗೆ ನಿಲ್ಲುತ್ತದೆ. ವನ್ಯಜೀವಿ ಚಿಕಿತ್ಸೆ ವೇಳೆ ಹುತಾತ್ಮರಾದ ಯುವವೈದ್ಯೆಯ ಹೆಸರಲ್ಲಿ ಸ್ಮಾರಕ ನಿರ್ಮಿಸಬೇಕು ಎಂಬ ಅವರ ತಂದೆ ಧ್ರುವಕುಮಾರ್ ಮತ್ತು ತಾಯಿ ಶೈಲಜಾ ರೆಡ್ಡಿ ಅವರ ಬೇಡಿಕೆಯನ್ನು ಪರಿಶೀಲಿಸುವುದಾಗಿ ತಿಳಿಸಿದ್ದಾರೆ. ಮೃಗಾಲಯದಲ್ಲಿ ವನ್ಯಜೀವಿಗಳಿಗೆ ಪಶುವೈದ್ಯರು ಚಿಕಿತ್ಸೆ ನೀಡುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದಲ್ಲಿ ಯಾವುದೇ ಲಿಖಿತ ಪ್ರಮಾಣಿತ ಮಾನದಂಡ ಇಲ್ಲ. ಈ ನಿಟ್ಟಿನಲ್ಲಿ ಮಹಿಳಾ ಪಶುವೈದ್ಯರಿಗೆ ಹಾಗೂ ವೈದ್ಯರಿಗೆ ಸುರಕ್ಷತೆ ಕಲ್ಪಿಸುವುದೂ ಸೇರಿದಂತೆ ಕೂಡಲೇ ಸೂಕ್ತ ಎಸ್.ಓ.ಪಿ. ರೂಪಿಸುವಂತೆ ಹಾಗೂ ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.
