ಉದಯವಾಹಿನಿ, ಮೈಸೂರು : ದೇಶದ ಸ್ವಚ್ಛ ನಗರಿ ಹಾಗೂ ವಿಶಾಲವಾದ ರಸ್ತೆಗಳನ್ನು ಹೊಂದಿರುವ ನಗರಗಳಲ್ಲಿ ಒಂದಾದ ಅರಮನೆ ನಗರಿಯಲ್ಲಿ ಈಗ ಟ್ರಾಫಿಕ್ ಸಿಗ್ನಲ್ಗಳಿಂದಾಗಿ ಹೊಸದಾಗಿ ಟ್ರಾಫಿಕ್ ಜಾಮ್ ಕಿರಿ ಕಿರಿ ಉಂಟಾಗಿದೆ. ಅವೈಜ್ಞಾನಿಕವಾಗಿ ಟ್ರಾಫಿಕ್ ಸಿಗ್ನಲ್ಗಳನ್ನು ಹಾಕಿರುವುದೇ ಟ್ರಾಫಿಕ್ ಜಾಮ್ಗೆ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಅವರ ಅಭಿಪ್ರಾಯದ ಪ್ರತ್ಯಕ್ಷ ವರದಿ ಇಲ್ಲಿದೆ.
ಅರಮನೆ ನಗರಿ ಮೈಸೂರು ರಾಜರ ದೂರದೃಷ್ಟಿಯಿಂದ ವಿಶಾಲವಾದ ರಸ್ತೆಗಳನನ್ನು ಹೊಂದಿದೆ. ಪ್ರವಾಸಕ್ಕೆ ಬರುವ ಜನರು ಮೈಸೂರಿನ ನಗರಗಳ ರಸ್ತೆಗಳನ್ನು ನೋಡಿ ಈ ನಗರದ ವ್ಯವಸ್ಥೆ ಬಗ್ಗೆ ಸಂತೋಷ ವ್ಯಕ್ತಪಡಿಸುತ್ತಿದ್ದರು. ಆದರೆ, ಇತ್ತೀಚಿಗೆ ಸಂಚಾರ ದಟ್ಟಣೆಯನ್ನ ಕಡಿಮೆ ಮಾಡುವ ಉದ್ದೇಶದಿಂದ ಅವೈಜ್ಞಾನಿಕ ಮತ್ತು ಅನಾವಶ್ಯಕ ಹೊಸ ಟ್ರಾಫಿಕ್ ಸಿಗ್ನಲ್ಗಳನ್ನು ಅಳವಡಿಸಲಾಗಿದೆ. ಹೀಗಾಗಿ, ಟ್ರಾಫಿಕ್ ಕಿರಿ ಕಿರಿ ಉಂಟಾಗಿದೆ ಎನ್ನುವುದು ಜನರ ದೂರಾಗಿದೆ.
43 ವೃತ್ತಗಳಲ್ಲಿ ಹೊಸ ಟ್ರಾಫಿಕ್ ಸಿಗ್ನಲ್ : ಕಳೆದ ವರ್ಷ 2025ಕ್ಕೂ ಮೊದಲು ಇಡೀ ಮೈಸೂರು ನಗರದಲ್ಲಿ 53 ಟ್ರಾಫಿಕ್ ಸಿಗ್ನಲ್ಗಳಿದ್ದವು. ಆದರೆ, ಕಳೆದ 6 ತಿಂಗಳಿನಿಂದ 43 ವೃತ್ತಗಳಲ್ಲಿ ಎಐ ಚಾಲಿತ ಆಧುನಿಕ ಹೊಸ ಟ್ರಾಫಿಕ್ ಸಿಗ್ನಲ್ಗಳನ್ನು ಅಳವಡಿಸಲಾಗಿದೆ. ಇವು ಟ್ರಾಫಿಕ್ ಜಾಮ್ಗೆ ಕಾರಣವಾಗಿವೆ. ಮೈಸೂರು ರೈಲ್ವೆ ನಿಲ್ದಾಣದಿಂದ ಜೆಎಲ್ಬಿ ರಸ್ತೆಯ ಮೂಲಕ ಆರ್ಟಿಒ ಸರ್ಕಲ್ವರೆಗೆ ಸುಮಾರು 2 ಕಿ. ಮೀ. ದೂರದ ದಾರಿಗೆ 6 ಟ್ರಾಫಿಕ್ ಸಿಗ್ನಲ್ಗಳಿವೆ. ವಾಹನ ಸವಾರರು 5 ನಿಮಿಷದಲ್ಲಿ ಸಾಗುವ ದಾರಿ ಇದಾಗಿದೆ. ಆದರೆ, ಅವರು ಟ್ರಾಫಿಕ್ನಲ್ಲಿ ಸಿಕ್ಕಿಕೊಂಡರೆ ಪ್ರಯಾಣಿಸಲು ಅರ್ಧ ಗಂಟೆ ಸಮಯ ಬೇಕಾಗುತ್ತದೆ.
