ಉದಯವಾಹಿನಿ, ಗಾಂಧಿನಗರ (ಗುಜರಾತ್​): ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಗುಜರಾತ್​ ವಿಧಾನಸಭೆಯಲ್ಲಿ ಯುಸಿಸಿ ಮಸೂದೆಯನ್ನು ಮಂಡಿಸಿದ್ದಾರೆ. ಸಿಎಂ ಭೂಪೇಂದ್ರ ಪಟೇಲ್, ವಿಧಾನಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ – UCC ಮಸೂದೆಗೆ ಸಂಬಂಧಿಸಿದಂತೆ ಮಹತ್ವದ ಹೇಳಿಕೆ ನೀಡಿದ್ದಾರೆ. ನರೇಂದ್ರ ಮೋದಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ಅನೇಕ ಕ್ರಾಂತಿಕಾರಿ ಸುಧಾರಣೆಗಳನ್ನು ಜಾರಿಗೆ ತರಲಾಗಿದೆ ಮತ್ತು ಆ ಸಂಪ್ರದಾಯವನ್ನು ಮುಂದುವರಿಸಲು ಗುಜರಾತ್‌ನಲ್ಲಿ ಯುಸಿಸಿ ಮಸೂದೆಯನ್ನು ಪರಿಚಯಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ನಮ್ಮ ಸನಾತನ ಸಂಸ್ಕೃತಿ ಯಾವಾಗಲೂ ಏಕತೆ ಮತ್ತು ಸಾಮರಸ್ಯದ ಪಾಠವನ್ನು ಕಲಿಸಿದೆ ಎಂದ ಸಿಎಂ ಪಟೇಲ್​, ಸತ್ಯ ಒಂದೇ; ಧರ್ಮಗಳು ಬೇರೆ ಬೇರೆಯಾಗಿರಬಹುದು. ಆದರೆ ನ್ಯಾಯ ಒಂದೇ ಆಗಿರಬೇಕು ಎಂದರು.
ಈ ವಿಧೇಯಕವು ಮದುವೆ, ವಿಚ್ಛೇದನ ಮತ್ತು ಕುಟುಂಬಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ತರುತ್ತದೆ. ವಿವಾಹಗಳ ಕಡ್ಡಾಯ ನೋಂದಣಿಯೊಂದಿಗೆ, ಲಿವ್ – ಇನ್ ಸಂಬಂಧಗಳ ನೋಂದಣಿಯನ್ನು ಸಹ ಕಡ್ಡಾಯಗೊಳಿಸಲಾಗುವುದು. ನೋಂದಣಿ ಮಾಡಿಕೊಳ್ಳಲು ವಿಫಲರಾದವರು ದಂಡನಾ ಕ್ರಮ ಎದುರಿಸಬೇಕಾಗುತ್ತದೆ ಎಂದು ವಿಧೇಯಕದಲ್ಲಿ ಹೇಳಲಾಗಿದೆ.
ಬಲವಂತದ ವಿವಾಹಕ್ಕೆ 7 ವರ್ಷ ಶಿಕ್ಷೆ: ಬಲವಂತದ ವಿವಾಹ ಪ್ರಕರಣಗಳಿಗೆ 7 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶವನ್ನು ಮಾಡಲಾಗಿದೆ. ಇದಲ್ಲದೇ , ಮದುವೆ ಮತ್ತು ವಿಚ್ಛೇದನವನ್ನು 7 ದಿನಗಳಲ್ಲಿ ನೋಂದಾಯಿಸದಿದ್ದರೆ, ₹10,000 ವರೆಗೆ ದಂಡ ವಿಧಿಸಲಾಗುತ್ತದೆ. ನ್ಯಾಯಾಲಯದ ಹೊರಗೆ ನೀಡಲಾಗುವ ವಿಚ್ಛೇದನಗಳನ್ನು ಅಮಾನ್ಯವೆಂದು ಪರಿಗಣಿಸಲಾಗುತ್ತದೆ ಮತ್ತು ಅಂತಹ ಪ್ರಕರಣಗಳಲ್ಲಿ 3 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಒದಗಿಸಲಾಗಿದೆ. ಲಿವ್-ಇನ್ ಸಂಬಂಧಗಳಿಗೆ ಕಾನೂನು ರಕ್ಷಣೆ ನೀಡಲು, ಸೆಕ್ಷನ್ 384 ರ ಅಡಿಯಲ್ಲಿ ಅವುಗಳ ನೋಂದಣಿಯನ್ನು ಕಡ್ಡಾಯಗೊಳಿಸಲಾಗಿದೆ. ವಿವಿಧ ಧರ್ಮಗಳು ಅಥವಾ ಸಮುದಾಯಗಳಿಗೆ ವಿಭಿನ್ನ ನಿಯಮಗಳು ಇರಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟವಾಗಿ ಹೇಳಿದ್ದಾರೆ. ಸಂವಿಧಾನವು ಎಲ್ಲರಿಗೂ ಸಮಾನವಾಗಿ ಅನ್ವಯಿಸುವಂತೆ, ಈ ಕಾನೂನು ಎಲ್ಲರಿಗೂ ಅನ್ವಯಿಸುತ್ತದೆ ಎಂದು ಅವರು ಹೇಳಿದ್ದಾರೆ.

ಗುಜರಾತ್‌ನಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಕುರಿತು ನಡೆಯುತ್ತಿರುವ ರಾಜಕೀಯ ಮತ್ತು ಸಾಮಾಜಿಕ ಚರ್ಚೆಯ ಮಧ್ಯೆ, ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಮಹತ್ವದ ಹೇಳಿಕೆ ನೀಡಿದ್ದಾರೆ. ಗುಜರಾತ್​ನ ಇತಿಹಾಸದಲ್ಲಿ ಇಂದು ಸುವರ್ಣಾಕ್ಷರಗಳಲ್ಲಿ ಕೆತ್ತಲ್ಪಡುತ್ತದೆ ಎಂದು ಬಣ್ಣಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!