ಉದಯವಾಹಿನಿ, ತಿರುವನಂತಪುರಂ (ಕೇರಳಂ): ರಂಗೇರುತ್ತಿರುವ ವಿಧಾನಸಭೆ ಚುನಾವಣೆಯ ನಡುವೆ, ರಾಜ್ಯದಲ್ಲಿ ಚುನಾವಣಾ ಆಯೋಗದ ಪತ್ರಕ್ಕೆ ಬಿಜೆಪಿ ಸೀಲ್ (ಮುದ್​ರೆ) ಹಾಕಿರುವುದು ವಿವಾದಕ್ಕೆ ಕಾರಣವಾಗಿದೆ. ಆದರೆ, ಇದು ಸಿಬ್ಬಂದಿಯ ಎಡವಟ್ಟಿನಿಂದ ಆಗಿದೆ ಎಂದು ಆಯುಕ್ತರು ಸ್ಪಷ್ಟೀಕರಣ ನೀಡಿದ್ದು, ಅಧಿಕಾರಿಯನ್ನು ಅಮಾನತು ಕೂಡ ಮಾಡಲಾಗಿದೆ.

ಆಡಳಿತಾರೂಢ ಸಿಪಿಎಂ, ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ಈ ಬಗ್ಗೆ ಟೀಕೆ ವ್ಯಕ್ತಪಡಿಸಿದೆ. ಚುನಾವಣಾ ಆಯೋಗವನ್ನು ಬಿಜೆಪಿ ನಿಯಂತ್ರಿಸುತ್ತಿದೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಆರೋಪಿಸಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ಬಗ್ಗೆ ಹಂಚಿಕೊಂಡಿರುವ ಪೋಸ್ಟ್​ಗಳನ್ನು ಅಳಿಸಲು ಆಯಾ ಸಂಸ್ಥೆಗಳಿಗೆ ಚುನಾವಣಾ ಆಯೋಗ ತಾಕೀತು ಮಾಡಿದೆ. ಆಗಿದ್ದೇನು?: ಚುನಾವಣಾ ಮಾರ್ಗಸೂಚಿಗಳುಳ್ಳ 2019ರ ದಿನಾಂಕ ಹೊಂದಿರುವ ಪತ್ರವೊಂದಕ್ಕೆ ಪ್ರಮಾಣ ಪತ್ರ ಲಗತ್ತಿಸಿ ಚುನಾವಣಾ ಆಯೋಗವು ಎಲ್ಲ ರಾಜಕೀಯ ಪಕ್ಷಗಳಿಗೆ ರವಾನಿಸಿದೆ. ಇದರಲ್ಲಿ ಆಯೋಗದ ಸೀಲ್​ ಬದಲಿಗೆ ಬಿಜೆಪಿಯ ಸೀಲ್​ ಹಾಕಲಾಗಿದೆ. ಇದರ ವಿರುದ್ಧ ಸಿಪಿಎಂ, ಕಾಂಗ್ರೆಸ್​ ಸೇರಿ ಇತರ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ.

ಸಿಪಿಎಂ ತನ್ನ ಸಾಮಾಜಿಕ ಮಾಧ್ಯಮಗಳಲ್ಲಿ ಇದರ ಫೋಟೋ ಹಂಚಿಕೊಂಡು ಟೀಕಿಸಿದೆ. ಭಾರತೀಯ ಚುನಾವಣಾ ಆಯೋಗ ಮತ್ತು ಬಿಜೆಪಿಯನ್ನು ಒಂದೇ ಶಕ್ತಿಕೇಂದ್ರ ನಿಯಂತ್ರಿಸುತ್ತಿದೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಚುನಾವಣಾ ಆಯೋಗದ ಪತ್ರದ ಮೇಲೆ ಬಿಜೆಪಿ ಮುದ್ರೆ ಇದೆ. ಈ ಹಿಂದೆ ಆರೋಪಿಸಿದಂತೆ ಇವಿಎಂನಲ್ಲಿ ನೀವು ಯಾವುದೇ ಗುಂಡಿಯನ್ನು ಒತ್ತಿದರೂ ಅದು ಕಮಲ ಗುರುತಿಗೆ ಮತ ಬೀಳುತ್ತದೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಆರೋಪಿಸಿದೆ. ಕೇರಳ ಕಾಂಗ್ರೆಸ್​ ಘಟಕವೂ ಈ ಬಗ್ಗೆ ಬರೆದುಕೊಂಡಿದ್ದು, ನೀವೇನಾದರೂ ಬಿಜೆಪಿ ಕಚೇರಿಯಿಂದ ಕೆಲಸ ಮಾಡುತ್ತಿದ್ದೀರಾ? ನಿಮ್ಮ ಲೆಟರ್​ ಹೆಡ್​​ನಲ್ಲಿ ಬಿಜೆಪಿ ಮುದ್ರೆ ಹೇಗೆ ಬಂದಿತು ಎಂದು ಪ್ರಶ್ನಿಸಿದೆ.
ಚುನಾವಣಾ ಆಯೋಗದ ಸ್ಪಷ್ಟನೆ: ವಿವಾದ ಭುಗಿಲೆದ್ದ ಬೆನ್ನಲ್ಲೇ ಈ ಕುರಿತು ಸ್ಪಷ್ಟನೆ ನೀಡಿರುವ ರಾಜ್ಯ ಚುನಾವಣಾ ಆಯೋಗ, ಇದು ಸಿಬ್ಬಂದಿ ಎಡವಟ್ಟಿನಿಂದ ಆದ ಪ್ರಮಾದವಾಗಿದೆ. ಈ ಬಗ್ಗೆ ಎಲ್ಲ ರಾಜಕೀಯ ಪಕ್ಷಗಳು ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಲಾಗಿದೆ ಎಂದಿದೆ. ಈ ಸಂಬಂಧ ಚುನಾವಣಾ ಆಯೋಗ ಹೊರಡಿಸಿದ ಅಧಿಕೃತ ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಲಾಗಿದೆ.

ಜೊತೆಗೆ ರಾಜಕೀಯ ಪಕ್ಷಗಳು ಮತ್ತು ಇತರರ ಈ ಕುರಿತು ಹಂಚಿಕೊಳ್ಳುತ್ತಿರುವ ಪೋಸ್ಟ್​ಗಳನ್ನು ಅಳಿಸಲು ಸಾಮಾಜಿಕ ಮಾಧ್ಯಮಗಳ ಸಂಸ್ಥೆಗಳಿಗೆ ತಾಕೀತು ಮಾಡಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಡಾ. ರಥನ್ ಯು. ಕೇಳ್ಕರ್ ಅವರು ಮಂಗಳವಾರ ಸ್ಪಷ್ಟಪಡಿಸಿದ್ದಾರೆ. ಸ್ಪಷ್ಟೀಕರಣದ ಜೊತೆಗೆ, ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಕಡತಗಳನ್ನು ನಿರ್ವಹಿಸುವ ಸಹಾಯಕ ವಿಭಾಗ ಅಧಿಕಾರಿಯನ್ನು ವಿಚಾರಣೆ ಪೂರ್ಣಗೊಳ್ಳುವವರೆಗೆ ಅಮಾನತು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ವಿಶೇಷ ಕಾರ್ಯದರ್ಶಿ ಪಿ.ಬಿ. ನೂಹ್ ಅವರ ನೇತೃತ್ವದಲ್ಲಿ ವಿವರವಾದ ತನಿಖೆಯನ್ನು ಪ್ರಾರಂಭಿಸಲಾಗಿದೆ. ತನಿಖೆ 48 ಗಂಟೆಗಳ ಒಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಮತ್ತು ಅಂತಿಮ ವರದಿಯ ಸಂಶೋಧನೆಗಳ ಆಧಾರದ ಮೇಲೆ ಮುಂದಿನ ಶಿಸ್ತು ಕ್ರಮಗಳನ್ನು ನಿರ್ಧರಿಸಲಾಗುತ್ತದೆ. ಆಯೋಗವು ಯಾವುದನ್ನೂ ಮರೆಮಾಡುವುದಿಲ್ಲ ಎಂದು ಕೇಳ್ಕರ್ ಒತ್ತಿ ಹೇಳಿದ್ದಾರೆ.
ಪೋಸ್ಟ್​ ಡಿಲೀಟ್​ ಮಾಡಲು ಸೂಚನೆ: ಇದರ ಜೊತೆಗೆ, ರಾಜ್ಯ ಸೈಬಲ್​ ಪೊಲೀಸ್​ ಕೂಡ ಈ ಬಗ್ಗೆ ನಿಗಾ ವಹಿಸಿದ್ದು, ಎಕ್ಸ್​ ಸಂಸ್ಥೆಗೆ ನೋಟಿಸ್​ ಜಾರಿ ಮಾಡಿದೆ. ಭಾರತೀಯ ಚುನಾವಣಾ ಆಯೋಗದ (ಇಸಿಐ) ಪ್ರತಿಷ್ಠೆಗೆ ಧಕ್ಕೆ ತರುವ ಮತ್ತು ಕೋಮು ಸಾಮರಸ್ಯಕ್ಕೆ ಹಾನಿ ಮಾಡುವ ವಿಷಯವನ್ನು ಹರಡುವ ಕೆಲವು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ತೆಗೆದುಹಾಕುವಂತೆ ಕೇಳಿದೆ.

Leave a Reply

Your email address will not be published. Required fields are marked *

error: Content is protected !!