ಉದಯವಾಹಿನಿ, ನ್ಯೂಯಾರ್ಕ್: ಏರ್ ಕೆನಡಾ ವಿಮಾನ ಪತನವಾದಾಗ ಘಟನಾ ಸ್ಥಳದಿಂದ 330 ಅಡಿ ದೂರಕ್ಕೆ ಹೋಗಿ ಬಿದ್ದ ಸಿಬ್ಬಂದಿ ಸೀಟ್‌ನಲ್ಲಿ ಸಿಲುಕಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಮಾನದ ಪ್ರಮುಖ ಸಿಬ್ಬಂದಿ ಸೋಲಾಂಜ್ ಟ್ರೆಂಬ್ಲೇ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನ್ಯೂಯಾರ್ಕ್‌ನ ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಏರ್ ಕೆನಡಾ ಎಕ್ಸ್‌ಪ್ರೆಸ್‌ ವಿಮಾನ ಫೈರ್ ಟ್ರಕ್‌ಗೆ ಡಿಕ್ಕಿಯಾಗಿತ್ತು. ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, 10ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ವಿಮಾನದಲ್ಲಿ 72 ಪ್ರಯಾಣಿಕರು ಹಾಗೂ ನಾಲ್ವರು ಸಿಬ್ಬಂದಿಯಿದ್ದರು ಎಂದು ತಿಳಿದುಬಂದಿದೆ.
ವಿಮಾನ ಡಿಕ್ಕಿಯಾದ ರಭಸಕ್ಕೆ ವಿಮಾನ ಸಿಬ್ಬಂದಿ ಸೋಲಾಂಜ್ ಟ್ರೆಂಬ್ಲೇ ಅವರಿದ್ದ ವಿಮಾನದ ಭಾಗವು 330 ಅಡಿ ದೂರಕ್ಕೆ ತಳ್ಳಲ್ಪಟ್ಟಿತು. ಆದರೆ ಅದೃಷ್ಯವಶಾತ್ ಸೋಲಾಂಜ್ ಅವರು ಸೀಟ್‌ನಲ್ಲಿ ಸಿಲುಕಿದ ಪರಿಣಾಮ ಬದುಕುಳಿದಿದ್ದಾರೆ. ಒಂದು ಕಾಲಿಗೆ ಗಾಯಗಳಾಗಿದ್ದು, ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ಅವರ ಮಗಳು ಸಾರಾ ಲೆಪೈನ್ ತಿಳಿಸಿದ್ದಾರೆ.
ಕೆನಡಾದ ಮಾಂಟ್ರಿಯಲ್‌ನಿಂದ ಬರುತ್ತಿದ್ದ ಏರ್ ಕೆನಡಾ ಎಕ್ಸ್‌ಪ್ರೆಸ್‌ ಸಿಆರ್‌ಜೆ-900 ವಿಮಾನವು ರನ್‌ವೇ 4ರಲ್ಲಿ ಲ್ಯಾಂಡ್ ಆಗುತ್ತಿತ್ತು. ಈ ವೇಳೆ ರನ್ ವೇನಲ್ಲೇ ಫೈರ್ ಟ್ರಕ್‌ಗೆ ವಿಮಾನ ಡಿಕ್ಕಿಯಾಗಿದೆ. ವಿಮಾನ ಅಪಘಾತದ ಬಳಿಕ ರಕ್ಷಣಾ ಕಾರ್ಯಾಚರಣೆಯ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿವೆ. ವೀಡಿಯೋದಲ್ಲಿ ವಿಮಾನದ ಮುಂಭಾಗಕ್ಕೆ ಹಾನಿಯಾಗಿರುವುದು ಕಾಣಿಸುತ್ತದೆ.

Leave a Reply

Your email address will not be published. Required fields are marked *

error: Content is protected !!