ಉದಯವಾಹಿನಿ, ಟೆಹ್ರಾನ್(ಇರಾನ್): ಇರಾನ್-ಇಸ್ರೇಲ್-ಅಮೆರಿಕ ನಡುವಿನ ಸೇನಾ ಸಂಘರ್ಷ ನಾಲ್ಕನೇ ವಾರವೂ ಮುಂದುವರೆದಿದೆ. ಇರಾನ್ ಹಾರ್ಮುಜ್ ಜಲಮಾರ್ಗವನ್ನು ಮುಕ್ತವಾಗಿಸದಿದ್ದರೆ, ಅದರ ಇಂಧನ ಸೌಲಭ್ಯಗಳ ಮೇಲೆ ದಾಳಿ ಮಾಡಿ ಧ್ವಂಸ ಮಾಡುವುದಾಗಿ ಅಮೆರಿಕ ನಿನ್ನೆ ಬೆದರಿಕೆ ಹಾಕಿದೆ. ಇದಕ್ಕೆ ಪ್ರತಿಸವಾಲು ಹಾಕಿರುವ ಇರಾನ್, ನಮ್ಮ ಇಂಧನ ಸೌಲಭ್ಯಗಳ ಮೇಲೆ ದಾಳಿ ನಡೆದರೆ ಹಾರ್ಮುಜ್ ಜಲಮಾರ್ಗವನ್ನು ಅನಿರ್ದಿಷ್ಟಾವಧಿಗೆ ಮುಚ್ಚುವುದಾಗಿ ಎಚ್ಚರಿಸಿದೆ.
ಹೆಚ್ಚುತ್ತಿರುವ ಯುದ್ಧ ಸಂಘರ್ಷದ ನಡುವೆ ಅಮೆರಿಕಕ್ಕೆ ಎಚ್ಚರಿಕೆ ನೀಡಿರುವ ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಕರ್ ಖಲೀಬಾಫ್, ಇರಾನ್ ವಿರುದ್ಧ ಅಂಥ ಯಾವುದೇ ಮಿಲಿಟರಿ ಕಾರ್ಯಾಚರಣೆ ನಡೆಸಿದ್ದೇ ಆದಲ್ಲಿ ಪ್ರತೀಕಾರದ ಕ್ರಮ ಕೈಗೊಳ್ಳದೆ ಬಿಡುವುದಿಲ್ಲ. ಅಮೆರಿಕದ ನೆಲೆಗಳನ್ನು ಹೊಂದಿರುವ ಪ್ರಾದೇಶಿಕ ದೇಶಗಳ ವಿದ್ಯುತ್ ಸ್ಥಾವರಗಳನ್ನು ಗುರಿಯಾಗಿಸಿ ದಾಳಿ ಮಾಡುತ್ತೇವೆ. ಎಲ್ಲಾ ನಿರ್ಣಾಯಕ ಇಂಧನ ಮತ್ತು ತೈಲ ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನು ನಾಶ ಮಾಡುತ್ತೇವೆ ಎಂದು ತಿಳಿಸಿದೆ.
ಹಾರ್ಮುಜ್ ಜಲಸಂಧಿ ಮೇಲೆ ಇರಾನ್ ಹಿಡಿತದಿಂದಾಗಿ ಜಾಗತಿಕ ಇಂಧನ, ತೈಲ ಬಿಕ್ಕಟ್ಟು ಎದುರಾಗಿರುವ ಹಿನ್ನೆಲೆಯಲ್ಲಿ ಶನಿವಾರ ಇರಾನ್ಗೆ ಎಚ್ಚರಿಕೆ ನೀಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮುಂದಿನ 48 ಗಂಟೆಗಳಲ್ಲಿ ಜಲಸಂಧಿಯನ್ನು ಹಡಗು ಸಾಗಣೆಗೆ ಮುಕ್ತಗೊಳಿಸದೇ ಇದ್ದರೆ ಇರಾನಿನ ಇಂಧನ ಮೂಲಸೌಕರ್ಯಗಳ ಮೇಲೆ ಬಾಂಬ್ ದಾಳಿ ಮಾಡುವುದಾಗಿ ಹೇಳಿದ್ದರು.
ಇದಕ್ಕೆ ಪ್ರತಿಯಾಗಿ ಇರಾನ್, ಒಂದು ವೇಳೆ ಇರಾನ್ ವಿದ್ಯುತ್ ಸ್ಥಾವರಗಳ ಮೇಲೆ ದಾಳಿ ನಡೆಸಿದ್ದೇ ಆದರೆ ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚಲಾಗುವುದು. ಅಲ್ಲದೇ ಇರಾನ್‌ನ ನಾಶವಾದ ವಿದ್ಯುತ್ ಸ್ಥಾವರಗಳನ್ನು ನಿರ್ಮಿಸುವವರೆಗೂ ಮತ್ತೆ ಇದನ್ನು ತೆರೆಯುವುದಿಲ್ಲ ಎಂದಿದೆ.ಈ ಬೆದರಿಕೆಗಳ ನಡುವೆ ಇಂದು ಮತ್ತೆ ಇಸ್ರೇಲ್ ಸೇನೆ ಇರಾನ್ ಮೇಲೆ ದಾಳಿ ನಡೆಸಿದೆ ಎಂದು ಟೈಮ್ಸ್ ಆಫ್ ಇಸ್ರೇಲ್ ತಿಳಿಸಿದೆ. ಟೆಹ್ರಾನ್‌ನಲ್ಲಿರುವ ಇರಾನ್‌ನ ‘ಭಯೋತ್ಪಾದಕ ಆಡಳಿತ’ದ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ಐಡಿಎಫ್ ದಾಳಿ ನಡೆಸಿದೆ ಎಂದು ತಿಳಿಸಿದೆ.
ಅಮೆರಿಕ ಇರಾನ್‌ನ ಕೋಮ್ ಟರ್ಬೈನ್ ಎಂಜಿನ್ ಉತ್ಪಾದನಾ ಘಟಕದ ಮೇಲೆ ದಾಳಿ ನಡೆಸಿದ್ದು, ಸೌಲಭ್ಯವನ್ನು ನಾಶಪಡಿಸಿದೆೆ. ಯುಎಸ್ ಸೆಂಟ್ರಲ್ ಕಮಾಂಡ್ ಪ್ರಕಾರ, ಈ ಘಟಕವನ್ನು ಡ್ರೋನ್‌ಗಳು ಮತ್ತು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ಗೆ ಸಂಬಂಧಿಸಿದ ವಿಮಾನ ಘಟಕಗಳಿಗೆ ಗ್ಯಾಸ್ ಟರ್ಬೈನ್ ಎಂಜಿನ್‌ಗಳನ್ನು ಉತ್ಪಾದಿಸಲು ಬಳಸಲಾಗುತ್ತಿತ್ತು ಎಂದು ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದೆ.
