ಉದಯವಾಹಿನಿ, ಮುಂಬೈ: ಬಾರಾಮತಿಯಲ್ಲಿ ನಡೆದಿದ್ದ ವಿಮಾನ ದುರಂತದಲ್ಲಿ ಡಿಸಿಎಂ ಅಜಿತ್ ಪವಾರ್​ ಸಾವಿನ ಕುರಿತು ಶಂಕೆ ವ್ಯಕ್ತಪಡಿಸಿ ಅಜಿತ್ ಪವಾರ್ ಅವರ ಸಂಬಂಧಿ ಹಾಗೂ ​ಎನ್‌ಸಿಪಿ ಎಸ್​ಪಿ ಶಾಸಕ ರೋಹಿತ್ ಪವಾರ್ ಅವರು ಬೆಂಗಳೂರಿನಲ್ಲಿ ಝಿರೋ ಎಫ್​ಐಆರ್​ ದಾಖಲಿಸಿದ್ದಾರೆ. ರೋಹಿತ್​ ದಾಖಲಿಸಿದ್ದ ಝಿರೋ ಎಫ್‌ಐಆರ್ ಅನ್ನು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಬಾರಾಮತಿ ಗ್ರಾಮೀಣ ಪೊಲೀಸ್​ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಬೆಂಗಳೂರಿನ ಪೊಲೀಸ್​ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು, ಕರ್ನಾಟಕ ಪೊಲೀಸರು ಮಹಾರಾಷ್ಟ್ರ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ ಎಂದು ರೋಹಿತ್​ ಪವಾರ್​ ತಿಳಿಸಿದ್ದಾರೆ. ಝಿರೋ ಎಫ್​ಐಆರ್ ಬಗ್ಗೆ ಮಾತನಾಡಿದ ಅವರು, ವಿಮಾನ ಅಪಘಾತ ಘಟನೆಯ ಆರೋಪಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಅವರ ಮೇಲಿದೆ ಎಂದು ತಿಳಿಸಿದ್ದಾರೆ.

ಅಜಿತ್​ ಪವಾರ್​ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಸಲ್ಲಿಸಲಾಗಿರುವ ಪ್ರಕರಣ ಮಹಾರಾಷ್ಟ್ರ ಪೊಲೀಸರಿಗೆ ವರ್ಗಾವಣೆಯಾದ ಬೆನ್ನಲ್ಲೇ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ರೋಹಿತ್​ ಪವಾರ್​, ಅಜಿತ್‌ದಾದಾ ವಿಮಾನ ಅಪಘಾತ ಪ್ರಕರಣದ ದೂರನ್ನು ಕರ್ನಾಟಕ ಪೊಲೀಸರು ಮಹಾರಾಷ್ಟ್ರ ಪೊಲೀಸರಿಗೆ ವರ್ಗಾಯಿಸಿದ್ದಾರೆ. ಈಗ ಮಹಾರಾಷ್ಟ್ರ ಪೊಲೀಸರು ವಿಚಾರಣೆ ನಡೆಸಲಿದ್ದು, ಆರೋಪಿಗಳಿಗೆ ಶಿಕ್ಷೆಯಾಗಲಿ. ಈ ಕುರಿತು ಸಮಗ್ರ ತನಿಖೆ ನಡೆಸಲಿ, ಇದಕ್ಕೆ ಸರ್ಕಾರವು ಸಹಕಾರ ನೀಡುತ್ತದೆ ಎಂಬ ನಿರೀಕ್ಷೆ ಇದೆ ಎಂದು ತಮ್ಮ ಪೋಸ್ಟ್​ ಮೂಲಕ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಪೊಲೀಸರಿಂದ ಮಹಾರಾಷ್ಟ್ರ ಡಿಜಿಪಿಗೆ ಪತ್ರ: ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಪ್ರಕರಣ ವರ್ಗಾವಣೆ ಮಾಡಿ ಕರ್ನಾಟಕ ಡಿಐಜಿ ಪರವಾಗಿ ಐಪಿಎಸ್​ ಅಧಿಕಾರಿ ಪಿ ಹರಿಶೇಖರನ್ ಸಹಿ ಮಾಡಿರುವ ಅಧಿಕೃತ ಪತ್ರವನ್ನು ಮಾರ್ಚ್ 24ರಂದು ಮಹಾರಾಷ್ಟ್ರ ಡಿಜಿಪಿಗೆ ಕಳುಹಿಸಲಾಗಿದೆ. ಝಿರೋ ಎಫ್‌ಐಆರ್ ಅನ್ನು ಬಾರಾಮತಿ ಗ್ರಾಮೀಣ ಪೊಲೀಸ್ ಠಾಣೆಗೆ ವರ್ಗಾಯಿಸುವ ಅಗತ್ಯವನ್ನು ಈ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಬೆಂಗಳೂರಿನಲ್ಲಿ ಪ್ರಕರಣ ದಾಖಲಿಸುವ ಮುನ್ನ ಮಾತನಾಡಿದ್ದ ರೋಹಿತ್​ ಪವಾರ್​, ನಮಗೆ ಬೇರೆ ಆಯ್ಜೆ ಇರಲಿಲ್ಲ. ಕಳೆದ ನಲವತ್ತು ವರ್ಷದಿಂದ ರಾಜ್ಯದಲ್ಲಿ ಸಾಮಾಜಿಕ ಮತ್ತು ರಾಜಕೀಯವಾಗಿ ಅಜಿತ್​ ಪವಾರ್​ ಕೆಲಸ ಮಾಡಿದ್ದಾರೆ. ಅಲ್ಲಿ ಜನರೊಂದಿಗೆ ಅವರಿಗೆ ಆತ್ಮೀಯ ಸಂಬಂಧವಿದೆ. ಈ ಅಪಘಾತದ ಬಳಿಕ ಈ ಪ್ರಕರಣವನ್ನು ಅಪರಾಧ ಆಯಾಮದಲ್ಲಿ ಸೂಕ್ತ ತನಿಖೆ ನಡೆಸುವುದು ಮತ್ತು ಎಫ್​ಐಆರ್​ ದಾಖಲಿಸುವುದು ನಿರ್ಣಾಯಕವಾಗಿದ್ದು, ಇದು ಪ್ರತಿಯೊಬ್ಬರ ಹಕ್ಕು ಎಂದಿದ್ದಾರೆ. ನಾವು ದೆಹಲಿಗೆ ಹೋಗಿ, ರಾಹುಲ್​ ಗಾಂಧಿಯನ್ನು ಭೇಟಿಯಾಗಿ ಚರ್ಚಿಸಿದಾಗ ಅವರು ಯಾವುದೇ ರಾಜ್ಯಕ್ಕೆ ಹೋಗಿ ಪ್ರಕರಣ ದಾಖಲಿಸಿ ಎಂದು ಸಲಹೆ ನೀಡಿದ್ದರು. ಇದೇ ರಾಜ್ಯ ಎಂದು ಅವರು ಸೂಚಿಸಲಿಲ್ಲ. ನಾವು ಕರ್ನಾಟಕಕ್ಕೆ ಹೋಗಿ ಪ್ರಕರಣ ದಾಖಲಿಸಿದೆವು. ಇದೀಗ ಕರ್ನಾಟಕ ಡಿಜಿಯಿಂದ ಮಹಾರಾಷ್ಟ್ರ ಡಿಜಿಗೆ ಪ್ರಕರಣ ಬಂದಿದೆ. ಇದೀಗ ಸರ್ಕಾರ ಏನು ಮಾಡುತ್ತದೆ ಎಂದು ನಾವು ನೋಡುತ್ತೇವೆ ಎಂದರು. ಈ ಮುಂಚಿನ ಬೆಳವಣಿಗೆಯಲ್ಲಿ ಮಹಾರಾಷ್ಟ್ರ ಪೊಲೀಸರು ಎಫ್​ಐಆರ್​ ದಾಖಲಿಸಲು ನಿರಾಕರಿಸಿದ್ದು, ಇದು ತನಿಖೆ ವಿಳಂಬಕ್ಕೆ ಕಾರಣವಾಯಿತು ಎಂದು ತಿಳಿಸಿದ್ದರು.

Leave a Reply

Your email address will not be published. Required fields are marked *

error: Content is protected !!