ಉದಯವಾಹಿನಿ, ಚೆನ್ನೈ (ತಮಿಳುನಾಡು): ರಾಜ್ಯ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಎಐಎಡಿಎಂಕೆ ನೇತೃತ್ವದ ಎನ್​ಡಿ ಕೂಟದ ಸೀಟು ಹಂಚಿಕೆ ಪ್ರಕ್ರಿಯೆ ಎರಡು ದಿನಗಳ ಹಿಂದೆ (ಸೋಮವಾರ) ಅಂತಿಮಗೊಂಡಿದೆ. ಇದೀಗ, ಮೈತ್ರಿಕೂಟದ ಯಾವ ಪಕ್ಷ ಯಾವ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಬೇಕು ಎಂಬುದೂ ನಿಕ್ಕಿಯಾಗಿದೆ. ಮೈತ್ರಿಕೂಟದ ಭಾಗವಾಗಿರುವ ಬಿಜೆಪಿ, ಪಿಎಂಕೆ ಸೇರಿದಂತೆ ಹಲವು ಪಕ್ಷಗಳಿಗೆ 65 ಸೀಟುಗಳನ್ನು ಅಖೈರು ಮಾಡಲಾಗಿದೆ. ಈ ಬಾರಿ ಹೆಚ್ಚಿನ ಸ್ಥಾನಗಳಲ್ಲಿ ಮಿತ್ರಪಕ್ಷಗಳು ಸ್ಪರ್ಧೆ ಮಾಡುತ್ತಿರುವುದು ವಿಶೇಷ.

ಯಾವ ಪಕ್ಷಗಳಿಗೆ ಎಷ್ಟೆಷ್ಟು ಸೀಟು?- ಇಲ್ಲಿದೆ ಲೆಕ್ಕಾಚಾರ: ಎಐಎಡಿಎಂಕೆ ಎನ್​ಡಿಎ ಕೂಟವನ್ನು ಮುನ್ನಡೆಸುತ್ತಿದೆ. ಇದರಲ್ಲಿ ಬಿಜೆಪಿ, ಪಟ್ಟಾಳಿ ಮಕ್ಕಳ್ ಕಚ್ಚಿ (ಪಿಎಂಕೆ) ತಮಿಳು ಮಾನಿಲ ಕಾಂಗ್ರೆಸ್(ಟಿಎಂಸಿ) ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ (ಎಎಂಎಂಕೆ), ಇಂಡಿಯಾ ಜನನಾಯಕ್ ಕಚ್ಚಿ (ಐಜೆಕೆ), ಪುರಚ್ಚಿ ಭರಥಮ್​ ಪಕ್ಷ (ಪಿಬಿಪಿ), ತಮಿಳಿಗ ಮಕ್ಕಳ್​​ ಮುನ್ನೇತ್ರ ಕಳಗಂ (ಟಿಎಂಎಂಕೆ) ಪಕ್ಷಗಳಿವೆ. ಎಐಎಡಿಎಂ ಅತಿಹೆಚ್ಚು ಅಂದರೆ 169 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಇನ್ನು ಉಳಿದ ಮಿತ್ರಪಕ್ಷಗಳು 65 ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿವೆ. ಬಿಜೆಪಿಗೆ 27, ಪಿಎಂಕೆಗೆ 18, ಎಎಂಎಂಕೆ ಪಕ್ಷಕ್ಕೆ 11, ಟಿಎಂಸಿಗೆ 5, ಐಜೆಕೆ ಪಾರ್ಟಿಗೆ 2, ಪಿಬಿಪಿ ಮತ್ತು ಟಿಎಂಎಂಕೆ ಪಕ್ಷಗಳಿಗೆ ತಲಾ ಒಂದು ಸೀಟನ್ನು ನಿಗದಿ ಮಾಡಲಾಗಿದೆ. ಇದರ ಜೊತೆಗೆ ಯಾವ ಪಕ್ಷ ಯಾವ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಬೇಕು ಎಂಬುದನ್ನೂ ಅಂತಿಮಗೊಳಿಸಲಾಗಿದೆ.

ಸೀಟು ಹಂಚಿಕೆ – ಅಮಿತ್​ ಶಾ ಜತೆ ಚರ್ಚಿಸಿ ಅಂತಿಮಗೊಳಿಸಿದ ಪಳನಿಸ್ವಾಮಿ: ಸೀಟು ಹಂಚಿಕೆ ಕುರಿತು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಪ್ರಮುಖ ನಾಯಕರೊಂದಿಗೆ ಹಲವು ಸುತ್ತಿನ ಮಾತುಕತೆಗಳನ್ನು ನಡೆಸಿದ್ದಾರೆ. ಈ ಎಲ್ಲದರ ಪರಿಣಾಮವಾಗಿ ಸೋಮವಾರ ಸೀಟು ಹಂಚಿಕೆ ನಿಕ್ಕಿಯಾಗಿದೆ. ತಮಿಳುನಾಡು ವಿಧಾನಸಭೆಯ 234 ಸ್ಥಾನಗಳಿಗೆ ಏಪ್ರಿಲ್ 23 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ 4 ರಂದು ಫಲಿತಾಂಶ ಪ್ರಕಟವಾಗಲಿದೆ.

Leave a Reply

Your email address will not be published. Required fields are marked *

error: Content is protected !!