ಉದಯವಾಹಿನಿ, ವಾಷಿಂಗ್ಟನ್(ಯುಎಸ್‌ಎ): ಕಳೆದ 26 ದಿನಗಳಿಂದ ನಡೆಯುತ್ತಿರುವ ಪಶ್ಚಿಮ ಏಷ್ಯಾ ಸಂಘರ್ಷದ ಅಂತ್ಯಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ 15 ಅಂಶಗಳ ಕದನ ವಿರಾಮ ಪ್ರಸ್ತಾಪ ಮುಂದಿಟ್ಟಿದ್ದಾರೆ. ನ್ಯೂಯಾರ್ಕ್ ಟೈಮ್ಸ್ ವರದಿ ಪ್ರಕಾರ, ಈ ಶಾಂತಿ ಯೋಜನೆಯನ್ನು ಮಂಗಳವಾರ ಪಾಕಿಸ್ತಾನದ ಮೂಲಕ ಇರಾನ್ ಅಧಿಕಾರಿಗಳಿಗೆ ಕಳುಹಿಸಲಾಗಿದೆ.
ಈ ಪ್ರಸ್ತಾಪದಲ್ಲಿ ಇರಾನ್‌ನ ಬ್ಯಾಲಿಸ್ಟಿಕ್ ಕ್ಷಿಪಣಿಗಳು, ಪರಮಾಣು ಕಾರ್ಯಕ್ರಮ ಹಾಗೂ ಹಾರ್ಮುಜ್​ ಸಮುದ್ರ ಮಾರ್ಗಗಳನ್ನು ಉಲ್ಲೇಖಿಸಲಾಗಿದೆ ಎಂದು ಎಬಿಸಿ ನ್ಯೂಸ್ ವರದಿ ಮಾಡಿದೆ. ಇರಾನ್​ಗೆ ಈ ಪ್ರಸ್ತಾಪ ಸಲ್ಲಿಸಲಾಗಿದೆ ಎಂದು ತಿಳಿಸಿದ್ದು, ಯಾವ ಅಧಿಕಾರಿಗೆ ಸಲ್ಲಿಸಲಾಗಿದೆ ಎಂಬ ವಿವರ ತಿಳಿದು ಬಂದಿಲ್ಲ. ಇಸ್ರೇಲ್​ ಪ್ರಸ್ತಾಪಕ್ಕೆ ಸಮ್ಮತಿ ನೀಡಿದೆಯೇ ಎಂಬ ಕುರಿತೂ ಸ್ಪಷ್ಟತೆ ಸಿಕ್ಕಿಲ್ಲ.

ಇರಾನ್‌ ತನ್ನ ಮೂರು ಪ್ರಮುಖ ಪರಮಾಣು ಪುಷ್ಟೀಕರಣ ತಾಣಗಳನ್ನು (ನಟಾಂಜ್, ಇಸ್ಫಹಾನ್ ಮತ್ತು ಫೋರ್ಡೊ ಪರಮಾಣು) ನಾಶಗೊಳಿಸಬೇಕು.
ಇರಾನ್​ ಯಾವುದೇ ಯುರೇನಿಯಂ ಪುಷ್ಟೀಕರಣ ಮಾಡುವಂತಿಲ್ಲ.
ಬ್ಯಾಲಿಸ್ಟಿಕ್ ಕ್ಷಿಪಣಿಗಳ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಬೇಕು.
ಪ್ರಾಕ್ಸಿಗಳಿಗೆ ಬೆಂಬಲ ನೀಡಬಾರದು. ಅವುಗಳಿಗೆ ಹಣಕಾಸು, ನಿರ್ದೇಶನ ಮತ್ತು ಶಸ್ತ್ರಾಸ್ತ್ರಗಳ ಪೂರೈಕೆ ನಿಲ್ಲಿಸಬೇಕು.
ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಮುಕ್ತವಾಗಿಸಬೇಕು.
ಅಂತಾರಾಷ್ಟ್ರೀಯ ಸಮುದಾಯ ಇರಾನ್ ಮೇಲೆ ವಿಧಿಸಿರುವ ಪರಮಾಣು ಸಂಬಂಧಿತ ನಿರ್ಬಂಧವನ್ನು ಮುಕ್ತಗೊಳಿಸಲಿದೆ.
ಅಮೆರಿಕ ಇರಾನಿನ ನಾಗರಿಕ ಪರಮಾಣು ಕಾರ್ಯಕ್ರಮಕ್ಕೆ ಸಹಾಯ ಮತ್ತು ಮೇಲ್ವಿಚಾರಣೆ ಮಾಡುತ್ತದೆ.
ಈ ವಿಚಾರಗಳನ್ನು ಪಾಲಿಸಲು ಇರಾನ್​ ವಿಫಲವಾದರೆ, ನಿರ್ಬಂಧಗಳನ್ನು ಸ್ವಯಂಚಾಲಿತವಾಗಿ ಇರಾನ್​ ಮೇಲೆ ಮತ್ತೆ ಹೇರಲು ಅವಕಾಶ ನೀಡುವ ‘ಸ್ನ್ಯಾಪ್‌ಬ್ಯಾಕ್’ ಕಾರ್ಯವಿಧಾನವನ್ನು ಅಳವಡಿಸುವುದಾಗಿ ಅಮೆರಿಕ ಹೇಳಿದೆ.

ನಾವು ಯುದ್ದ ಗೆದ್ದಿದ್ದೇವೆ- ಟ್ರಂಪ್: ಇರಾನ್​ ವಿರುದ್ಧ ಐದು ದಿನಗಳ ಕಾಲ ದಾಳಿ ನಿಲ್ಲಿಸಿದ ಘೋಷಣೆಯ ಬೆನ್ನಲ್ಲೇ ನಿನ್ನೆ ಮಾತನಾಡಿದ್ದ ಅಮೆರಿಕ ಅಧ್ಯಕ್ಷ ಟ್ರಂಪ್​, ಅಮೆರಿಕ ಈಗಾಗಲೇ ಯುದ್ಧ ಗೆದ್ದಿದೆ. ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದಲು ಸಾಧ್ಯವಿಲ್ಲ ಎಂದು ಖಚಿತಪಡಿಸಿಕೊಳ್ಳುವುದು ಯುದ್ಧದ ಪ್ರಮುಖ ಗುರಿಯಾಗಿತ್ತು. ಈ ಕುರಿತು ಮಾತುಕತೆ ಸಾಗುತ್ತಿದ್ದು, ಮುಂಚಿತವಾಗಿ ಏನನ್ನೂ ಹೇಳುವುದಿಲ್ಲ. ಅವರು ಎಂದಿಗೂ ಪರಮಾಣು ಶಸ್ತ್ರಾಸ್ತ್ರ ಹೊಂದುವುದಿಲ್ಲ ಎಂದು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!