ಉದಯವಾಹಿನಿ, ವಾಷಿಂಗ್ಟನ್(ಯುಎಸ್ಎ)​: ಇರಾನ್​ ಸಂಘರ್ಷ ಅಂತ್ಯಕ್ಕೆ 15 ಅಂಶಗಳ ಯೋಜನೆ ಪ್ರಸ್ತಾಪಿಸಿರುವ ಬೆನ್ನಲ್ಲೇ ಅಮೆರಿಕ ಮಧ್ಯಪ್ರಾಚ್ಯದಲ್ಲಿ ಮತ್ತೆ ದೊಡ್ಡ ಸೇನಾಪಡೆ ನಿಯೋಜನೆಗೆ ಸನ್ನದ್ಧವಾಗಿದೆ. ಈ ಕುರಿತು ತಿಳಿದಿರುವ ಮೂವರು ಅಧಿಕಾರಿಗಳ ಪ್ರಕಾರ, ಅಮೆರಿಕ ತನ್ನ 82ನೇ ಏರ್‌ಬೋರ್ನ್‌ ವಿಭಾಗದಿಂದ ಕನಿಷ್ಠ 1,000 ಪಡೆಯನ್ನು ಮುಂಬರುವ ದಿನಗಳಲ್ಲಿ ಮಧ್ಯಪ್ರಾಚ್ಯಕ್ಕೆ ಕಳುಹಿಸಲು ಸಿದ್ಧತೆ ನಡೆಸುತ್ತಿದೆ.
ಸೇನೆಯ ತುರ್ತು ಪ್ರತಿಕ್ರಿಯೆ ತಂಡ ಎಂದು ಈ ಘಟಕವನ್ನು ಪರಿಗಣಿಸಲಾಗಿದೆ. ಈ ಪಡೆಯಲ್ಲಿ 1ನೇ ಬ್ರಿಗೇಡ್​ ಯುದ್ದ ತಂಡದ ಜೊತೆಗೆ ವಿಭಾಗದ ಕಮಾಂಡರ್ ಮೇಜರ್ ಜನರಲ್ ಬ್ರಾಂಡನ್ ಟೆಗ್ಟ್‌ಮಿಯರ್ ಮತ್ತು ವಿಭಾಗದ ಸಿಬ್ಬಂದಿ ಇದ್ದಾರೆ ಎಂದು ಅನಾಮಧೇಯ ಅಧಿಕಾರಿಗಳು ತಿಳಿಸಿದ್ದಾರೆ.
ಇರಾನ್​ ಯುದ್ದ ಶಮನ ಮಾತುಕತೆಗಳ ನಡುವೆ ಇತ್ತೀಚಿಗೆ ಹಲವಾರು ನೌಕಾಪಡೆ ಹಡಗುಗಳಲ್ಲಿ ಸಾವಿರಾರು ಸಿಬ್ಬಂದಿ ಈ ಪ್ರದೇಶಕ್ಕೆ ತೆರಳಿದ್ದರು. ಈ ಘಟಕಗಳಿಗೆ ಅಮೆರಿಕದ ರಾಯಭಾರ ಕಚೇರಿಗಳನ್ನು ಬೆಂಬಲಿಸುವುದು, ನಾಗರಿಕರನ್ನು ಸ್ಥಳಾಂತರಿಸುವುದು ಮತ್ತು ವಿಪತ್ತು ಪರಿಹಾರ ಸೇರಿದಂತೆ ಕಾರ್ಯಾಚರಣೆಗಳಲ್ಲಿ ತರಬೇತಿ ನೀಡಲಾಗಿದೆ.
ಈ ಪಡೆಗಳ ನಿಯೋಜನೆ ಕುರಿತ ಮಾತನಾಡಿದ ಶ್ವೇತಭವನದ ವಕ್ತಾರ ಅನ್ನಾಕೆಲ್ಲಿ, ಅಧ್ಯಕ್ಷ ಟ್ರಂಪ್ ಅವರು ಯಾವಾಗಲೂ ಎಲ್ಲಾ ಮಿಲಿಟರಿ ಆಯ್ಕೆಗಳನ್ನು ಹೊಂದಿದ್ದಾರೆ ಎಂದಿದ್ದಾರೆ.
ಸೆನೆಟ್ ಸಶಸ್ತ್ರ ಸೇವೆಗಳ ಸಮಿತಿಯ ಸದಸ್ಯರು ಕ್ಯಾಪಿಟಲ್ ಹಿಲ್‌ನಲ್ಲಿ ಪೆಂಟಗನ್ ಅಧಿಕಾರಿಗಳಿಂದ ವರದಿ ಪಡೆಯಲಿದ್ದಾರೆ. ಈ ವೇಳೆ ನಿಯೋಜನೆಯ ಕುರಿತು ಚರ್ಚಿಸುವ ನಿರೀಕ್ಷೆಯಿದೆ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ನ್ಯೂಯಾರ್ಕ್ ಟೈಮ್ಸ್ 82ನೇ ಏರ್‌ಬೋರ್ನ್ ಅನ್ನು ಮಧ್ಯಪ್ರಾಚ್ಯಕ್ಕೆ ನಿಯೋಜಿಸುವ ಸಾಧ್ಯತೆಯ ಬಗ್ಗೆ ವರದಿ ಮಾಡಿತ್ತು. ಜಪಾನ್ ಮೂಲದ ಯುಎಸ್‌ಎಸ್ ಟ್ರಿಪೋಲಿ ಮತ್ತು 31ನೇ ಮೆರೈನ್ ಎಕ್ಸ್‌ಪೆಡಿಷನರಿ ಘಟಕವನ್ನು ತೈವಾನ್ ಬಳಿಯಿಂದ ಮಧ್ಯಪ್ರಾಚ್ಯಕ್ಕೆ ಸ್ಥಳಾಂತರಿಸಲು ಆದೇಶಿಸಲಾಗಿದೆ ಎಂದು ಅಮೆರಿಕದ ಅಧಿಕಾರಿಗಳು ಈ ಹಿಂದೆ ಹೇಳಿದ್ದರು.

Leave a Reply

Your email address will not be published. Required fields are marked *

error: Content is protected !!