ಉದಯವಾಹಿನಿ, ಮನೆಯಿಂದ ಹೊರಗೆ ಹೆಜ್ಜೆ ಇಡುತ್ತಿರಲಿ ಹಾಗೂ ಕಚೇರಿಯಲ್ಲಿ ಕುಳಿತಿರಲಿ. ನಮ್ಮ ಮೊಬೈಲ್​ ಫೋನಗಳು ಹಾಗೂ ಸ್ಮಾರ್ಟ್​ವಾಚ್​ ಪ್ರತಿದಿನ ಎಷ್ಟು ಹೆಜ್ಜೆಗಳನ್ನು ನಡೆಯುತ್ತೇವೆ ಎಂಬುದನ್ನು ನಿರಂತರವಾಗಿ ಪ್ರದರ್ಶಿಸುತ್ತವೆ. ನಾವು ಕೆಲವೊಮ್ಮೆ 2,000 ಸ್ಟೆಪ್ಸ್ ಮಾತ್ರ ವಾಕಿಂಗ್​ ಮಾಡುತ್ತೇವೆ. ಬಹುತೇಕ ಬಾರಿ 10,000 ಸ್ಟೆಪ್ಸ್ ಅನ್ನು ಗುರಿಯನ್ನು ಯಶಸ್ವಿಯಾಗಿ ತಲುಪಿದಾಗ ನಮಗೆ ವಿಶಿಷ್ಟವಾದ ಸಾಧನೆ ಮಾಡಿದ ಭಾವನೆ ಲಭಿಸುತ್ತದೆ.
ಕಠಿಣ ವ್ಯಾಯಾಮಗಳಿಗಾಗಿ ಜಿಮ್‌ಗೆ ಭೇಟಿ ನೀಡಲು ಸಮಯವಿಲ್ಲದವರಿಗೆ ಹಾಗೂ ತಮ್ಮ ದೇಹವನ್ನು ತೀವ್ರವಾದ ದೈಹಿಕ ಒತ್ತಡಕ್ಕೆ ಒಳಪಡಿಸದಿರಲು ಇಷ್ಟಪಡುವವರಿಗೆ ವಾಕಿಂಗ್​ ನಿಜವಾಗಿಯೂ ದೈವದತ್ತ ವರ ಎಂದು ಹೇಳಬಹುದು. ಬೆಳಗ್ಗೆ ಹಾಲು ಖರೀದಿಸಲು ವಾಕಿಂಗ್​ ಮಾಡುತ್ತಾ ಹೋಗುವುದು, ಊಟದ ಬಳಿಕ ಸ್ವಲ್ಪ ದೂರ ವಾಕಿಂಗ್​ ಮಾಡುವುದು, ಫೋನ್‌ನಲ್ಲಿ ಮಾತನಾಡುತ್ತಾ ನಡೆಯುವುದು ಹೀಗೆ ಸರಳ ಕ್ರಿಯೆಗಳಿಂದ ಹಿಡಿದು ಈ ಸಣ್ಣ ಸಣ್ಣ ಬದಲಾವಣೆಗಳು ನಮ್ಮ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತವೆ. ಇದರೊಂದಿಗೆ ಆರೋಗ್ಯಕ್ಕೆ ಲಭಿಸುವ ಪ್ರಯೋಜನಗಳೇನು ಎಂಬುದನ್ನು ತಿಳಿಯೋಣ.

ಹೃದಯ ಆರೋಗ್ಯಕ್ಕೆ ಅತ್ಯುತ್ತಮ: ನಮ್ಮ ಹೃದಯವು ಪಂಪ್‌ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ನಾವು ಪ್ರತಿದಿನ 10,000 ಸ್ಟೆಪ್ಸ್ ವಾಕಿಂಗ್​ ಮಾಡುವುದರಿಂದ ಹೃದಯ ಹಾಗೂ ರಕ್ತನಾಳಗಳೆರಡಕ್ಕೂ ಸೌಮ್ಯವಾಗಿರುವ ಪರಿಣಾಮಕಾರಿ ವ್ಯಾಯಾಮ ಒದಗಿಸುತ್ತದೆ. ಅಧಿಕ ರಕ್ತದೊತ್ತಡ ಹೊಂದಿರುವ ವ್ಯಕ್ತಿಗಳಿಗೆ ದೈನಂದಿನ ದಿನಚರಿಯಲ್ಲಿ ಹೆಚ್ಚುವರಿಯಾಗಿ 1,000 ಹೆಜ್ಜೆಗಳನ್ನು ಸೇರಿಸುವುದರಿಂದ ಹೃದಯಾಘಾತ, ಪಾರ್ಶ್ವವಾಯು ಅಪಾಯ ಗಮನಾರ್ಹವಾಗಿ ಕಡಿಮೆ ಮಾಡಬಹುದು ಎಂದು ಹಲವು ಅಧ್ಯಯನಗಳು ತಿಳಿಸುತ್ತವೆ. NIH ವೆಬ್​ಸೈಟ್​ನಲ್ಲಿ ಪ್ರಕಟವಾದ ಹಲವು ಸಂಶೋಧನೆಗಳು ತಿಳಿಸುವ ಪ್ರಕಾರ, ವೇಗದ ವಾಕಿಂಗ್ ಮಾಡುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಬಹಿರಂಗಪಡಿಸುತ್ತವೆ. ಇದು ದೀರ್ಘಕಾಲದವರೆಗೆ ನಿಮ್ಮ ಹೃದಯವನ್ನು ಬಲವಾಗಿರಿಸುವುದರ ಜೊತೆಗೆ ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.

ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಒಳ್ಳೆಯದು: ಮಧುಮೇಹದಿಂದ ಬಳಲುತ್ತಿರುವವರಿಗೆ ಹಾಗೂ ಈ ಕಾಯಿಲೆ ಬರುವ ಅಪಾಯದಲ್ಲಿರುವವರಿಗೆ ವಾಕಿಂಗ್ ಅತ್ಯುತ್ತಮ ಚಿಕಿತ್ಸೆಯ ರೂಪವಾಗಿ ಕಾರ್ಯನಿರ್ವಹಿಸುತ್ತದೆ. ನಾವು ವಾಕಿಂಗ್​ ಮಾಡುವಾಗ ನಮ್ಮ ಸ್ನಾಯುಗಳು ನಮ್ಮ ರಕ್ತಪ್ರವಾಹದಲ್ಲಿರುವ ಗ್ಲೂಕೋಸ್ ಅನ್ನು ಶಕ್ತಿಯ ಮೂಲವಾಗಿ ಬಳಸಿಕೊಳ್ಳುತ್ತವೆ. ಗಮನಾರ್ಹವಾಗಿ ಈ ಪ್ರಕ್ರಿಯೆಗೆ ಇನ್ಸುಲಿನ್‌ನ ಗಮನಾರ್ಹ ಸಹಾಯದ ಅಗತ್ಯವಿಲ್ಲ. ಇದರ ಪರಿಣಾಮವಾಗಿ ಊಟದ ಬಳಿಕ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಹಠಾತ್ ಏರಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ. NIH ಅಧ್ಯಯನ ತಿಳಿಸುವ ಪ್ರಕಾರ, ದಿನಕ್ಕೆ 10,000 ಸ್ಟೆಪ್ಸ್ ವಾಕಿಂಗ್ ಮಾಡುವ ವ್ಯಕ್ತಿಗಳಲ್ಲಿ ದೀರ್ಘಕಾಲೀನ ರಕ್ತದಲ್ಲಿನ ಸಕ್ಕರೆ ನಿಯಂತ್ರಣದ ಸೂಚಕವಾದ HbA1c ಮಟ್ಟಗಳು ಕಡಿಮೆಯಾಗುವುದನ್ನು ಗಮನಿಸಲಾಗಿದೆ.

 

Leave a Reply

Your email address will not be published. Required fields are marked *

error: Content is protected !!