ಉದಯವಾಹಿನಿ, ಭೋಪಾಲ್ (ಮಧ್ಯಪ್ರದೇಶ): ಏನೂ ಸಮಸ್ಯೆ ಇಲ್ಲ ಎಂದು ಕೇಂದ್ರ ಸರ್ಕಾರ ಎಷ್ಟೇ ಸಮಜಾಯಿಸಿ ನೀಡಿದರೂ, ಮಧ್ಯಪ್ರಾಚ್ಯ ಸಂಘರ್ಷದಿಂದ ದೇಶದಲ್ಲಿ ಇಂಧನ ಕೊರತೆ ಉಂಟಾಗಿರುವುದಂತೂ ಸತ್ಯ. ಗ್ಯಾಸ್ ಇಲ್ಲದೆ ಹೋಟೆಲ್ಗಳು, ಪೆಟ್ರೋಲ್, ಡೀಸೆಲ್ ಲಭ್ಯವಿಲ್ಲದೆ ಬಂಕ್ಗಳು ಬಾಗಿಲು ಎಳೆದುಕೊಂಡಿವೆ. ಪೆಟ್ರೋಲ್ ಪಂಪ್ಗಳ ಮುಂದೆ ಜನರು ಸರತಿ ಸಾಲಿನಲ್ಲಿ ನಿಂತು ಇಂಧನ ತುಂಬಿಸಿಕೊಳ್ಳುತ್ತಿದ್ದಾರೆ. ಕೆಲವೆಡೆ ಸಿಗದ ಕಾರಣ ವಾಹನ ಬಳಕೆಯನ್ನು ನಿಲ್ಲಿಸುವಂತಾಗಿದೆ. ಹೀಗೆ, ಪೆಟ್ರೋಲ್ ಲಭ್ಯವಿಲ್ಲದ ಕಾರಣ ಬ್ಯಾಂಕ್ ಉದ್ಯೋಗಿಯೊಬ್ಬ ಕುದುರೆ ಏರಿ ಕೆಲಸಕ್ಕೆ ಹಾಜರಾಗಿದ್ದಾನೆ.
ಬೈಕ್ ಬಿಟ್ಟು ಕುದುರೆ ಏರಿದ: ಖಾಸಗಿ ಬ್ಯಾಂಕಿನ ಕಲೆಕ್ಷನ್ ಏಜೆಂಟ್ ಗೋಪಾಲ್ ಠಾಕೂರ್ ಎಂಬವರು ಬೈಕ್ ಬಿಟ್ಟು ತಮ್ಮಲ್ಲಿದ್ದ ಕುದುರೆಯನ್ನು ಏರಿ ಆಫೀಸ್ಗೆ ಬಂದಿದ್ದಾರೆ. ಟಿಪ್ಟಾಪ್ ಆಗಿ ರೆಡಿಯಾಗಿದ್ದ ಗೋಪಾಲ್ ಅವರು ಕುದುರೆ ಮೇಲೆ ಸವಾರಿ ಮಾಡಿಕೊಂಡು ಹೋಗುತ್ತಿರುವುದನ್ನ ಜನರು ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ದೇವಾಸ್ ಜಿಲ್ಲೆಯ ರಾಧಾಗಂಜ್ ನಿವಾಸಿಯಾಗಿರುವ ಠಾಕೂರ್ ಅವರು ಜವಾಹರ್ ನಗರ ಶಾಖೆಯ ತಮ್ಮ ಕಚೇರಿಗೆ ಬೈಕ್ನಲ್ಲಿ ಬರುತ್ತಾರೆ. ಪೆಟ್ರೋಲ್ ಹಾಸಿಕೊಳ್ಳಲು ಉದ್ದನೆಯ ಸಾಲಿನಲ್ಲಿ ನಿಲ್ಲಬೇಕು. ಇದರಿಂದ ಸಮಯಕ್ಕೆ ಸರಿಯಾಗಿ ಆಫೀಸ್ಗೆ ಹೋಗಲು ಸಾಧ್ಯವಿಲ್ಲ ಎಂದರಿತ ಅವರು, ಖರ್ಚು ಮತ್ತು ಟ್ರಾಫಿಕ್ ಸಮಸ್ಯೆ ಇಲ್ಲದ ಕುದುರೆ ಸವಾರಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ತಮ್ಮ ಮನೆಯಿಂದ ಮೂರು ಕಿಲೋ ಮೀಟರ್ ದೂರ ಕುದುರೆಯಲ್ಲಿ ಬಂದಿದ್ದಾರೆ. ದಾರಿ ನಡುವೆ ಇದನ್ನು ಕಂಡ ಜನರು ಅಚ್ಚರಿಗೊಂಡಿದ್ದಾರೆ. ಇನ್ನು ಕೆಲವರು ವಿಡಿಯೋ ಮಾಡಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಆಫೀಸ್ ತಲುಪಿದ ಬಳಿಕ ಸಹೋದ್ಯೋಗಿಗಳು ಕೂಡ ಅಚ್ಚರಿ ವ್ಯಕ್ತಪಡಿಸಿ ನಗೆ ಬೀರಿದ್ದಾರೆ.
