ಉದಯವಾಹಿನಿ, ಇಂಡೋ ಪೆಸಿಫಿಕ್‌ನಲ್ಲಿ ಶಾಂತಿ ಮತ್ತು ಸ್ಥಿರತೆಗೆ ಹಾಗೂ ಏಷ್ಯಾದಲ್ಲಿ ಅನುಕೂಲಕರ ಅಧಿಕಾರ ಸಮತೋಲನವನ್ನು ಖಚಿತಪಡಿಸಿಕೊಳ್ಳಲು ಭಾರತದ ಪಾತ್ರ ಅತ್ಯಗತ್ಯ ಎಂದು ಟ್ರಂಪ್ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಮೆರಿಕದ ಯುದ್ಧ ನೀತಿ ಕಾರ್ಯದರ್ಶಿ ಎಲ್ಬ್ರಿಡ್ಜ್ ಕೋಲ್ಬಿ ಈ ಬಗ್ಗೆ ಮಾತನಾಡಿದ್ದು, ಭಾರತ ಅಮೆರಿಕ ಕಾರ್ಯತಂತ್ರವನ್ನು ಬಲಪಡಿಸಲು ನಾಲ್ಕು ಅಂಶಗಳ ಕಾರ್ಯಸೂಚಿಯನ್ನು ಪಟ್ಟಿ ಮಾಡಿದ್ದು, ಯಾವುದೇ ಬೇರೆ ಶಕ್ತಿ ಇಂಡೋ ಪೆಸಿಫಿಕ್‌ನಲ್ಲಿ ಪ್ರಾಬಲ್ಯ ಸಾಧಿಸಬಾರದು ಎಂದು ಪರೋಕ್ಷವಾಗಿ ಚೀನಾವನ್ನು ಉಲ್ಲೇಖಿಸಿ ಮಾತನಾಡಿದರು.
ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಬಿಕ್ಕಟ್ಟು ಹಾಗೂ ಇಂಡೋ -ಪೆಸಿಫಿಕ್‌ನಲ್ಲಿ ಹೆಚ್ಚುತ್ತಿರುವ ಚೀನಾದ ಮಿಲಿಟರಿ ಬಲವರ್ಧನೆಯ ಕಳವಳಗಳ ಮಧ್ಯೆ ಅಮೆರಿಕದ ಅಧೀನ ಕಾರ್ಯದರ್ಶಿ ಎರಡು ದಿನಗಳ ನವದೆಹಲಿ ಭೇಟಿ ಕೈಗೊಂಡಿದ್ದಾರೆ. ಭಾರತದ ರಕ್ಷಣಾ ಕಾರ್ಯದರ್ಶಿ ಆರ್.ಕೆ. ಸಿಂಗ್ ಜೊತೆಗೆ ರಕ್ಷಣಾ ನೀತಿ ಗುಂಪಿನ ಸಭೆಯ ಸಹ – ಅಧ್ಯಕ್ಷತೆಯನ್ನು ಅವರು ವಹಿಸಲಿದ್ದಾರೆ. ಪರಸ್ಪರ ಪರಿಣಾಮಕಾರಿ ಸಹಕಾರಕ್ಕೆ ಅಮೆರಿಕ ಮತ್ತು ಭಾರತ ಎಲ್ಲದರಲ್ಲೂ ಒಪ್ಪಂದ ಮಾಡಿಕೊಳ್ಳುವ ಅಗತ್ಯವಿಲ್ಲ. ಮುಖ್ಯವಾಗಿ ನಮ್ಮ ಆಸಕ್ತಿಗಳು ಮತ್ತು ಉದ್ದೇಶಗಳು ಅತ್ಯಂತ ಮೂಲಭೂತ ವಿಷಯಗಳ ಮೇಲೆ ಬಹುತೇಕ ಒಂದೇ ನಿಲುವು ಹೊಂದಿವೆ ಎಂದು ಅವರು ಇದೇ ವೇಳೆ ಹೇಳಿದ್ದಾರೆ.
ಇಂಡೋ ಪೆಸಿಫಿಕ್ ಅಂತಾರಾಷ್ಟ್ರೀಯ ರಾಜಕೀಯ, ಅರ್ಥಶಾಸ್ತ್ರ ಮತ್ತು ಭದ್ರತೆಯಲ್ಲಿ ಭಾರತ ಕೇಂದ್ರವಾಗಿದೆ. ಭಾರತೀಯ ಮತ್ತು ಅಮೆರಿಕದ ಹಿತಾಸಕ್ತಿಗಳು ಮತ್ತು ದೀರ್ಘಕಾಲೀನ ಸಮೃದ್ಧಿಯು ಈ ಪ್ರದೇಶದ ಬೆಳವಣಿಗೆಗಳಿಂದ ನಿರ್ಣಾಯಕವಾಗಿದೆ. ಕೆಲವು ವಿಚಾರಗಳಲ್ಲಿ ಎರಡು ದೇಶಗಳಲ್ಲಿ ಭಿನ್ನಾಭಿಪ್ರಾಯಗಳು ಅಥವಾ ವಿವಾದಗಳಿದ್ದರೂ ಸಹ, ಒಂದೇ ಹಿತಾಸಕ್ತಿ ಇದ್ದು, ಭಾರತದೊಂದಿಗೆ ಕೆಲಸ ಮಾಡಲು ಅಮೆರಿಕ ಬದ್ಧವಾಗಿದೆ. ನವದೆಹಲಿಯು ಭಾರತ ಮೊದಲು ನೀತಿ ಅಳವಡಿಸಿಕೊಂಡಿದ್ದರೆ, ವಾಷಿಂಗ್ಟನ್ ಅಮೆರಿಕ ಮೊದಲು ಪಾಲಿಸಿಯನ್ನು ಅಳವಡಿಸಿಕೊಂಡಿದೆ. ಇದು ಅವರವರ ನೀತಿಗಳ ನಡುವಣ ಹೊಂದಾಣಿಯನ್ನು ಎತ್ತಿ ತೋರಿಸುತ್ತಿದೆ ಎಂದು ಹೇಳಿದ್ದಾರೆ.
