ಉದಯವಾಹಿನಿ ಬೇಸಿಗೆಯ ಹಣ್ಣುಗಳೇ ಹಾಗೆ, ಎಂಥಾ ಬಾಯಾರಿಕೆಯನ್ನೂ ಮೀರಿಸಿ ಬಾಯಲ್ಲಿ ನೀರೂರಿಸುತ್ತವೆ. ಉದಾಹರಣೆಗೆ, ಗೊಂಚಲಲ್ಲಿ ತೂಗುವ ರಸಭರಿತ ದ್ರಾಕ್ಷಿ ಹಣ್ಣು (Grapes) ಗಳನ್ನೇ ನೋಡಿ, ಅವು ಕಣ್ಣಿಗೆ ಮಾತ್ರ ತಂಪಲ್ಲ, ಬಾಯಿ, ಹೊಟ್ಟೆಗೂ ಹಿತ. ಒಂದಿಷ್ಟು ಹುಳಿ, ಕೆಲವೊಮ್ಮೆ ಚಿಟಿಕೆಯಷ್ಟು ಒಗರು, ಬಹಳಷ್ಟು ಸಿಹಿ ರುಚಿಯ ಮಿಶ್ರಣದ ಹಣ್ಣುಗಳಿವು. ಇದರ ಬಣ್ಣಗಳೇ ಕೆಲವೊಮ್ಮೆ ಈ ಹಣ್ಣುಗಳ ಘಮ, ರುಚಿಯನ್ನು ನಾಲಿಗೆಯ ಮೇಲೆ ಉದ್ದೀಪಿಸಿ ಬಿಡುತ್ತವೆ. ತಿಳಿ ಹಸಿರು, ಅಚ್ಚ ಹಸಿರು, ನಸುಗೆಂಪು, ತುಸು ಹೆಚ್ಚೇ ಕೆಂಪು, ಕಪ್ಪು, ನಸು ನೀಲಿ, ನೇರಳೆ- ಹೀಗೆ ಹಲವಾರು ಬಣ್ಣಗಳಲ್ಲಿ ದ್ರಾಕ್ಷಿಯನ್ನು ಕಾಣಬಹುದು. ಹೊರಮೈ ಮಾಟಗಳೂ ಅಷ್ಟೇ, ಸಣ್ಣದು, ದೊಡ್ಡದು, ಉರುಟಾದ್ದು, ಮೊಟ್ಟೆಯಾಕಾರದ್ದು, ಉದ್ದ ಮಾಟದ್ದು- ಎಷ್ಟೊಂದು ಬಗೆಗಳಿವೆ. ಹಾಗೆಂದು ಈ ಯಾವ ಬಣ್ಣ, ಮಾಟಗಳ ದ್ರಾಕ್ಷಿ ತಿಂದರೂ, ರುಚಿ ಮತ್ತು ಪೋಷಕತತ್ವಗಳಿಗೆ ಏನೂ ಮೋಸವಿಲ್ಲ. ಹಾಗಾದರೆ ಏನೆಲ್ಲ ಲಾಭಗಳಿವೆ ದ್ರಾಕ್ಷಿ ತಿನ್ನುವುದರಲ್ಲಿ?
ಕ್ಯಾನ್ಸರ್ ದೂರ: ಪಾಲಿಫೆನಾಲ್ ಮತ್ತು ರೆಸ್ವೆರಾಟ್ರೋಲ್‌ನಂಥ ಪ್ರಮುಖ ಉತ್ಕರ್ಷಣ ನಿರೋಧಕ ಗಳು ದ್ರಾಕ್ಷಿಯಲ್ಲಿವೆ. ಕ್ಯಾನ್ಸರ್ ಅಥವಾ ಯಾವುದೇ ರೀತಿಯ ಗಡ್ಡೆಗಳು ಬೆಳೆಯದಂತೆ ತಡೆಯುವ ಸಾಮರ್ಥ್ಯ ಇವುಗಳಿಗಿರುವುದಾಗಿ ಅಧ್ಯಯನಗಳು ಹೇಳುತ್ತವೆ. ಯಕೃತ್, ಕರುಳು, ಸ್ತನ, ಜಠರ, ಚರ್ಮ ಮುಂತಾದ ಕಡೆಗಳಲ್ಲಿ ಕ್ಯಾನ್ಸರ್ ಗಡ್ಡೆಗಳು ಬಾರದಂತೆ ಕಾಪಾಡುತ್ತದೆ, ಇದರಲ್ಲಿನ ಕ್ವಾರ್ಸೆಂಟೀನ್ ಎಂಬ ಫ್ಲವನಾಯ್ಡ್‌ನಿಂದ ಕ್ಯಾನ್ಸರ್ ಕೋಶಗಳ ಬೆಳವಣಿಗೆ ಕುಂಠಿತಗೊಳ್ಳುವುದು ಪತ್ತೆಯಾಗಿದೆ.
ಹೃದಯಾರೋಗ್ಯ ವೃದ್ಧಿ: ಇದರ ಪಾಲಿಫೆನಾಲ್‌ಗಳು ದೇಹದಲ್ಲಿನ ಉರಿಯೂತ ತಗ್ಗಿಸಿ, ಹೃದಯದ ಆಯಸ್ಸು ಹೆಚ್ಚಿಸುತ್ತವೆ. ರಕ್ತದ ಪರಿಚಲನೆಯನ್ನು ವೃದ್ಧಿಸಿ, ಹೃದಯಕ್ಕೆ ಬಾಧೆಯಾಗದಂತೆ ನೋಡಿಕೊಳ್ಳುತ್ತವೆ. ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುವಂತೆ ಮಾಡುವ ಬಗ್ಗೆಯೂ ಅಧ್ಯಯನಗಳು ಹೇಳುತ್ತವೆ.
ದೃಷ್ಟಿ ಚುರುಕು: ನಿಯಮಿತವಾಗಿ ದ್ರಾಕ್ಷಿ ಹಣ್ಣು ತಿನ್ನುವುದರಿಂದ ಕಣ್ಣಿನ ದೃಷ್ಟಿ ಮಂದವಾಗುವ ಸಾಧ್ಯತೆಯನ್ನು ಶೇ. ೩೬ರಷ್ಟು ತಗ್ಗಿಸಬಹುದು ಎನ್ನುತ್ತವೆ ಅಧ್ಯಯನಗಳು. ಅದರಲ್ಲೂ ಕೆಂಪು ದ್ರಾಕ್ಷಿಯನ್ನು ಪ್ರತಿದಿನ ಸೇವಿಸುವುದರಿಂದ ವೃದ್ಧಾಪ್ಯದಲ್ಲಿ ಕಾಡುವ ದೃಷ್ಟಿದೋಷದ ಸಾಧ್ಯತೆ ಕ್ಷೀಣವಾಗುತ್ತದೆ.
ಮೂಳೆಗಳ ಬಲವರ್ಧನೆ: ತಾಮ್ರ, ಕಬ್ಬಿಣ, ಮ್ಯಾಂಗನೀಸ್‌ನಂಥ ಅಗತ್ಯ ಖನಿಜಗಳನ್ನು ಹೊಂದಿರುವ ದ್ರಾಕ್ಷಿಯ ಸೇವನೆಯಿಂದ ಮೂಳೆಗಳ ಶಕ್ತಿಯನ್ನು ಹೆಚ್ಚಿಸಬಹುದು. ಆಸ್ಟಿಯೊ ಆರ್ಥರೈಟಿಸ್‌ನಿಂದ ಉಂಟಾಗುವ ಮಂಡಿ ನೋವಿನ ಉಪಟಳವನ್ನು ದ್ರಾಕ್ಷಿಗಳು ಶಮನ ಮಾಡಬಲ್ಲವು. ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಕೀಲುಗಳಲ್ಲಿ ಶಕ್ತಿ ಸಂಚಯಿಸಿ, ಅವುಗಳ ಕ್ಷಮತೆಯನ್ನು ಹೆಚ್ಚಿಸುತ್ತವೆ.
