ಉದಯವಾಹಿನಿ, ನವದೆಹಲಿ: ರಾಜ್ಯದ ಪ್ರಾದೇಶಿಕ ರೈಲು ಸಂಪರ್ಕಕ್ಕೆ ಮಹತ್ವದ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದ್ದು, ಮೈಸೂರು-ಕೆಎಸ್‌ಆರ್ ಬೆಂಗಳೂರು ನಡುವೆ ನಿತ್ಯವು ಸಂಚರಿಸಲಿರುವ ಒಡೆಯರ್ ಎಕ್ಸ್‌ಪ್ರೆಸ್ ರೈಲು ರಾಮನಗರದಲ್ಲಿ ನಿಲುಗಡೆಗೆ ಅನುಮೋದನೆ ನೀಡಿದೆ. ಈ ಬಗ್ಗೆ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರಿಗೆ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಮಂತ್ರಿಗಳಾದ ಹೆಚ್.ಡಿ ಕುಮಾರಸ್ವಾಮಿ ಅವರು ಮಾಡಿದ್ದ ಮನವಿ ಫಲಪ್ರದವಾಗಿದೆ.
ಮಾರ್ಚ್ 24ರ ಮಂಗಳವಾರದಂದು ರೈಲ್ವೆ ಸಚಿವಾಲಯ ಈ ಬಗ್ಗೆ ಆದೇಶ ಹೊರಡಿಸಿದೆ. ಈ ಮೂಲಕ ರಾಮನಗರದಿಂದ ನಿತ್ಯವೂ ಬೆಂಗಳೂರಿಗೆ ಸಂಚರಿಸುವ ಪ್ರಯಾಣಿಕರಿಗೆ ಹೆಚ್ಚು ಅನುಕೂಲ ಆಗಲಿದೆ. ಈ ಬಗ್ಗೆ ಸಚಿವ ಕುಮಾರಸ್ವಾಮಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. 2026ರ ಫೆಬ್ರವರಿ 4ರಂದು ಹೆಚ್.ಡಿ ಕುಮಾರಸ್ವಾಮಿ ಅವರು ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು. ಪ್ರತಿನಿತ್ಯವೂ ರಾಮನಗರದಿಂದ ಸಾವಿರಾರು ಪ್ರಯಾಣಿಕರು ಬೆಂಗಳೂರಿಗೆ ಉದ್ಯೋಗ, ಶಿಕ್ಷಣ, ವ್ಯಾಪರ ಇತ್ಯಾದಿ ಉದ್ದೇಶಗಳಿಗೆ ಹೋಗಿ ಬರುತ್ತಾರೆ. ಅದರಲ್ಲಿಯೂ ಮುಖ್ಯವಾಗಿ ಗಾರ್ಮೆಂಟ್ ಉದ್ಯಮದಲ್ಲಿ ಸಾವಿರಾರು ಮಹಿಳೆಯರು ಕೆಲಸಕ್ಕಾಗಿ ರಾಜಧಾನಿಗೆ ದಿನನಿತ್ಯವೂ ಹೋಗಿ ಬರುತ್ತಾರೆ. ಅಲ್ಲದೇ ಶಿಕ್ಷಣಕ್ಕೆ ವಿದ್ಯಾರ್ಥಿಗಳು ಹೋಗಿ ಬರುತ್ತಾರೆ. ಕೂಲಿ ಕಾರ್ಮಿಕರಿಗೆ ಕೂಡ ಈ ರೈಲು ನಿಲುಗಡೆಯಿಂದ ಹೆಚ್ಚು ಪ್ರಯೋಜನ ಆಗಲಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ
