ಉದಯವಾಹಿನಿ, ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ ಪ್ರೇಕ್ಷಕರು ಶಿಳ್ಳೆ ಹಾಕಿದ್ದಕ್ಕೆ ಕಲಾವಿದ ಉಜಿರೆ ಅಶೋಕ್ ಭಟ್ ಗರಂ ಆಗಿ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ.ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯವರು ಕುಂದಾಪುರದ ಹೆನ್ನಾಬೈಲಿನಲ್ಲಿ ಮಾ.26 ರ ರಾತ್ರಿ ಯಕ್ಷಗಾನ ಪ್ರದರ್ಶನ ನೀಡುತ್ತಿದ್ದರು.
ಭಾಗವತರು ಪದ್ಯ ಹೇಳುತ್ತಾ ಆಲಾಪನೆ ಮಾಡುತ್ತಿದ್ದಾಗ ಪ್ರೇಕ್ಷಕರು ಶಿಳ್ಳೆ ಹಾಕಿದ್ದಾರೆ. ಪದ್ಯ ಮುಗಿದ ನಂತರ ಕೃಷ್ಣನ ಪಾತ್ರ ಧರಿಸಿದ್ದ ಕಲಾವಿದ ಅಶೋಕ್ ಭಟ್ ಅರ್ಥ ಹೇಳಬೇಕಿತ್ತು. ಈ ವೇಳೆ ಗರಂ ಆದ ಅವರು ಪ್ರೇಕ್ಷಕರಿಗೆ ಬುದ್ಧಿ ಮಾತು ಹೇಳಿದ್ದಾರೆ.
ನೀವು ಶಿಳ್ಳೆ ನಿಲ್ಲಿಸದಿದ್ದರೆ ನಾನು ಹೋಗುತ್ತೇನೆ. ಇದು ದೊಂಬರಾಟವೋ? ಇದು ಯಕ್ಷಗಾನವೊ? ಕೋಳಿ ಕಟ್ಟವೋ? ಕಂಬಳವೋ ಎಂದು ವೇದಿಕೆಯಲ್ಲೇ ಪ್ರಶ್ನಿಸಿ ಸಿಟ್ಟು ಹೊರಹಾಕಿದ್ದಾರೆ. ಶಿಳ್ಳೆ ಹಾಕಿದ್ದು ಯಾರು? ಹುಚ್ಚರನ್ನು ಬೆಳೆಸಬೇಡಿ. ಕಲಾ ಪ್ರೇಕ್ಷಕರನ್ನು ಬೆಳೆಸಿ. ಆಗದೇ ಇದ್ದರೆ ಬನ್ಸ್ ತಿಂದು ಹೋಗಿ. ಭಾಗವತರ ಕಂಠ ಹಾಳು ಮಾಡುತ್ತೀರಾ? ನಾವು ಯಕ್ಷಗಾನ ಮಾಡಬೇಕೋ? ಏನು ಹೇಳುತ್ತೀರಿ ಎಂದು ಹಿರಿಯರಲ್ಲಿ ಪ್ರಶ್ನೆ ಮಾಡಿದ್ದಾರೆ.
ಅಶೋಕ್ ಭಟ್ ಅವರ ಪ್ರೇಕ್ಷಕರನ್ನು ತರಾಟೆಗೆ ತೆಗೆದುಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇದಕ್ಕೆ ಪರ, ವಿರೋಧ ಚರ್ಚೆ ನಡೆಯುತ್ತಿದೆ. ಕೆಲವರು ಅಶೋಕ್ ಭಟ್ ಅವರನ್ನು ಸಮರ್ಥಿಸಿಕೊಂಡಿದಾರೆ. ಇನ್ನು ಕೆಲವರು ಕಲಾವಿದರು ಮೇಲೆ ಬರಲು ಪ್ರೇಕ್ಷಕರು ಕಾರಣ. ಭಾಗವತರು ಉತ್ತಮ ಪದ್ಯವನ್ನು ಹಾಡಿದಾಗ ಅವರಿಗೆ ಮೆಚ್ಚುಗೆ ಸೂಚಿಸಿದರೆ ತಪ್ಪೇನು ಎಂದು ಪ್ರಶ್ನಿಸಿದ್ದಾರೆ.
