ಉದಯವಾಹಿನಿ, ನವದೆಹಲಿ: ಮಧ್ಯಪ್ರಾಚ್ಯ ಸಂಘರ್ಷ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶದ ತೈಲ ಮತ್ತು ನೈಸರ್ಗಿಕ ಅನಿಲ ಸರಬರಾಜು ಸಮಸ್ಯೆಯನ್ನು ಸೂಕ್ಷ್ಮವಾಗಿ ಮೇಲ್ವಿಚಾರಣೆ ಮಾಡಲು ಕೇಂದ್ರ ಸರ್ಕಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಅಂತರ-ಸಚಿವಾಲಯ ಸಮಿತಿಯನ್ನು ರಚಿಸಿದೆ. ಸಮಿತಿಯಲ್ಲಿ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಸೇರಿದಂತೆ ಇತರೆ ಪ್ರಮುಖ ಸಚಿವರು ಸದಸ್ಯರಾಗಿದ್ದಾರೆ. ಈ ಸಮಿತಿ ಭಾರತದ ತೈಲ ಮತ್ತು ಅನಿಲ ಸರಬರಾಜು ಕ್ಷೇತ್ರದಲ್ಲಿ ಉಂಟಾಗುವ ಸಮಸ್ಯೆಗಳನ್ನು ತಕ್ಷಣವೇ ಪತ್ತೆ ಹಚ್ಚಿ ಪರಿಹರಿಸುವ ಉದ್ದೇಶ ಹೊಂದಿದೆ.
ಈ ಸಮಿತಿ ರಚನೆಯೊಂದಿಗೆ ಕೇಂದ್ರ ಸರ್ಕಾರ ಇಂಧನ ಕ್ಷೇತ್ರದ ಸ್ಥಿರತೆಯನ್ನು ಕಾಪಾಡುವ ನಿಟ್ಟಿನಲ್ಲಿ ತ್ವರಿತ ಕ್ರಮಗಳನ್ನು ಕೈಗೊಂಡಿದೆ. ಅಲ್ಲದೇ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸಲ್ ಸಾಕಷ್ಟು ದಾಸ್ತಾನು ಇದೆ ಎಂದು ಕೇಂದ್ರ ಭರವಸೆ ನೀಡಿದೆ. ಜನರು ಆತಂಕಕ್ಕೊಳಗಾಗಿ ಅನಗತ್ಯವಾಗಿ ಇಂಧನ ಸಂಗ್ರಹಿಸುವುದನ್ನು ತಪ್ಪಿಸಬೇಕು ಎಂದು ಮನವಿ ಮಾಡಿದೆ.ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಘರ್ಷಣೆ ತೀವ್ರಗೊಂಡಿದೆ. ಈ ಹಿನ್ನೆಲೆ ಇರಾನ್ ಹಾರ್ಮೂಜ್ ಜಲಸಂಧಿಯನ್ನು ನಿರ್ಬಂಧಿಸಿದೆ. ಜಗತ್ತಿನ ಒಟ್ಟು ತೈಲ ಮತ್ತು ಅನಿಲ ಸರಬರಾಜಿನ ಸುಮಾರು 20-25% ಈ ಮಾರ್ಗದ ಮೂಲಕ ಸಾಗುತ್ತದೆ. ಭಾರತಕ್ಕೂ 12-15% ಕಚ್ಚಾತೈಲ ಈ ಮಾರ್ಗದಿಂದಲೇ ಬರುತ್ತಿತ್ತು. ಈ ನಿರ್ಬಂಧನದಿಂದಾಗಿ ಜಗತ್ತಿನ ಇಂಧನ ಬೆಲೆಗಳು ಏರಿಕೆಯಾಗುವ ಸಾಧ್ಯತೆಯಿದೆ ಎಂಬ ಆತಂಕ ಸಹ ವ್ಯಕ್ತವಾಗಿದೆ.
