ಉದಯವಾಹಿನಿ, ಮುಂಬೈ: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಸ್ವಯಂ ಘೋಷಿತ ದೇವಮಾನವನೊಬ್ಬ ತಾನು ಶಿವನ ಅವತಾರ ಎಂದು ಹೇಳಿಕೊಂಡು 35 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಯನ್ನು ಋಷಿಕೇಶ್ ವೈದ್ಯ (40) ಎಂದು ಗುರುತಿಸಲಾಗಿದೆ. ಪುಣೆ ನಿವಾಸಿಯಾಗಿರುವ ಮಹಿಳೆ 2023 ರಲ್ಲಿ ಫೇಸ್‌ಬುಕ್ ಮೂಲಕ ಆರೋಪಿಗೆ ಪರಿಚಯವಾಗಿದ್ದಳು. ಆ ವರ್ಷ ಡಿಸೆಂಬರ್‌ನಲ್ಲಿ, ಆರೋಪಿಯು ಮಹಿಳೆಯನ್ನು ಭೇಟಿಯಾಗಲು ಪುಣೆಗೆ ಭೇಟಿ ನೀಡಿದ್ದ. ಬಳಿಕ ಪುಣೆಯ ಮಂಜರಿ ಪ್ರದೇಶದ ಲಾಡ್ಜ್‌ಗೆ ಕರೆದೊಯ್ದು, ಅಲ್ಲಿ ಅತ್ಯಾಚಾರವೆಸಗಿದ್ದ. ಇದಕ್ಕೂ ಮುನ್ನ ಮಂಪರು ಬರುವ ಔಷಧ ನೀಡಿದ್ದ. ದೌರ್ಜನ್ಯ ಎಸಗುವ ಛಾಯಾಚಿತ್ರಗಳನ್ನು ತೆಗೆದಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ.

ಆರೋಪಿ ಫೋಟೋಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿದ್ದಾನೆ. ಕಳೆದ ವರ್ಷ ಮೇ ತಿಂಗಳಲ್ಲಿ, ವಸೈನಲ್ಲಿರುವ ಹೋಟೆಲ್‌ಗೆ ಕರೆದು ಮತ್ತೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.

ನಾಸಿಕ್‌ನ ʻಕ್ಯಾಪ್ಟನ್ʼಖರತ್ ಪ್ರಕರಣವು ತನ್ನ ಸಂಕಷ್ಟವನ್ನು ಹಂಚಿಕೊಳ್ಳಲು ಧೈರ್ಯ ನೀಡಿದ ನಂತರ ಮಹಿಳೆ ದೂರು ನೀಡಲು ಮುಂದೆ ಬಂದಿದ್ದಾಗಿ ತಿಳಿಸಿದ್ದಾಳೆ ಎಂದು ಮಾಣಿಕ್‌ಪುರ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಹೀರಾಲಾಲ್ ಜಾಧವ್ ಹೇಳಿದ್ದಾರೆ. ಅಲ್ಲದೇ ಆರೋಪಿಯು ಇದೇ ರೀತಿಯಲ್ಲಿ ಹಲವಾರು ಮಹಿಳೆಯರಿಗೆ ಆಮಿಷವೊಡ್ಡಿ ಲೈಂಗಿಕವಾಗಿ ಶೋಷಣೆ ಮಾಡಿದ್ದಾನೆ ಎಂದು ದೂರುದಾರರು ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!