ಉದಯವಾಹಿನಿ, ಭೋಪಾಲ್: ‘ಕೌನ್ ಬನೇಗಾ ಕರೋಡ್ ಪತಿ’ ಟಿವಿ ಕಾರ್ಯಕ್ರಮದಲ್ಲಿ 50 ಲಕ್ಷ ರೂ. ಗೆದ್ದು ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದ ಮಧ್ಯಪ್ರದೇಶದ ಮಹಿಳಾ ತಹಶೀಲ್ದಾರ್ ಅಮಿತಾ ಸಿಂಗ್ ತೋಮರ್ ವಿರುದ್ಧ 2.5 ಕೋಟಿ ರೂ. ಪ್ರವಾಹ ಪರಿಹಾರ ಹಗರಣದಲ್ಲಿ ಭಾಗಿಯಾದ ಆರೋಪ ಕೇಳಿ ಬಂದಿದೆ. ಈ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2021ರಲ್ಲಿ ಬರೋಡಾ ತಹಸಿಲ್‌ನಲ್ಲಿ ನಡೆದ ಅಕ್ರಮಗಳ ಆರೋಪದ ಮೇಲೆ ನಾಕಾದಲ್ಲಿರುವ ಅವರ ಮನೆಯಲ್ಲಿ ತೋಮರ್ ಅವರನ್ನು ಬಂಧಿಸಲಾಯಿತು. ಬಳಿಕ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಶಿವಪುರಿಯ ಜೈಲಿನಲ್ಲಿ ಇರಿಸಲಾಗಿದೆ. ತೋಮರ್ ಈ ಹಿಂದೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅವರ ಮೇಲ್ಮನವಿ ಅರ್ಜಿ ತಿರಸ್ಕೃತಗೊಡಿತ್ತು.
ಬಂಧನದ ದಿನ ತೋಮರ್ ಕರ್ತವ್ಯಕ್ಕೆ ಗೈರುಹಾಜರಾಗಿದ್ದರು. ಪೊಲೀಸರ ತಂಡವು ಅವರನ್ನು ಪತ್ತೆಹಚ್ಚಿ ಗ್ವಾಲಿಯರ್‌ನ ನಾಕಾದಲ್ಲಿ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.2021ರ ಪ್ರವಾಹ ಪರಿಹಾರ ಹಗರಣದಲ್ಲಿ ಇದುವರೆಗೆ 22 ಕಂದಾಯ ಅಧಿಕಾರಿಗಳು ಮತ್ತು ಒಬ್ಬ ತಹಶೀಲ್ದಾರ್ ಬಂಧನವಾಗಿದೆ. ಹಗರಣದಲ್ಲಿ 2.5 ಕೋಟಿ ರೂ. ಹಣವನ್ನು ನಕಲಿ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ 110 ಜನರನ್ನು ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ.
