ಉದಯವಾಹಿನಿ, ಜೈಪುರ (ರಾಜಸ್ಥಾನ): ದೇಶದ ಅತಿದೊಡ್ಡ ಉಪ್ಪುನೀರಿನ ಸರೋವರವಾದ ಸಾಂಬಾರ್‌ನ ಮಧ್ಯದಲ್ಲಿ ವಿಜ್ಞಾನ ಮತ್ತು ತರ್ಕವನ್ನು ಮೀರಿದ ಆಧ್ಯಾತ್ಮಿಕ ಕೇಂದ್ರವೊಂದು ಇದೆ. ರಾಜಧಾನಿ ಜೈಪುರದಿಂದ 105 ಕಿಲೋಮೀಟರ್ ದೂರದಲ್ಲಿರುವ ಸುಮಾರು 1,700 ವರ್ಷಗಳಷ್ಟು ಹಳೆಯದಾದ ಶಾಕಾಂಬರಿ ಮಾತಾ ದೇವಾಲಯ ರಾಜಸ್ಥಾನದ ಶ್ರದ್ದಾಭಕ್ತಿ ಕೇಂದ್ರವಾಗಿದೆ.

ಈ ದೇವಾಲಯವು ಪ್ರಕೃತಿ ಮತ್ತು ನಿರ್ಸಗದ ದೇವತೆಯಾದ ಶಾಕಾಂಬರಿ ಮಾತೆಗೆ ಸಮರ್ಪಿತವಾಗಿದೆ. ಇಲ್ಲಿ ದೇವರಿಗೆ ಭಕ್ತರು ಹಸಿರು ತರಕಾರಿಗಳನ್ನು ಹಣ್ಣು – ಹೂವಿನೊಂದಿಗೆ ಸಮರ್ಪಿಸುವುದು ವಿಶೇಷವಾಗಿದೆ. ಭಕ್ತರು ತಮ್ಮಿಷ್ಟದ ಹರಕೆ ಪೂರೈಕೆಗೆ ತರಕಾರಿ ಸಲ್ಲಿಸುವುದು ಇಲ್ಲಿನ ವಾಡಿಕೆ.
ಸಾಂಬಾರ್ ಸರೋವರದ ಮಧ್ಯದಲ್ಲಿರುವ ಬೆಟ್ಟದ ಮೇಲೆ ಈ ದೇಗುಲ ನಿರ್ಮಿತವಾಗಿದೆ. ಈ ಉಪ್ಪುನೀರಿನ ಸರೋವರದ ಸುತ್ತ 240 ಚದರ ಕಿ.ಮೀ ಪ್ರದೇಶದ ನಡುವೆ ಇರುವ ದೇವಾಲಯದ ಸುತ್ತಲಿನ ಪ್ರದೇಶವು ಹಸಿರು ಮತ್ತು ಅನೇಕ ಜಾತಿಯ ಮರಗಳಿಂದ ಕೂಡಿದೆ. ಇದನ್ನು ದೇವತೆಯ ಪವಾಡ ಎಂಬ ನಂಬಿಕೆಯು ಈ ಭಾಗದಲ್ಲಿದೆ. ಈ ದೇವಾಲಯವು ಸುಮಾರು 1700 ವರ್ಷಗಳ ಇತಿಹಾಸ ಹೊಂದಿದೆ.

ಕ್ಷಾಮದಿಂದ ರಕ್ಷಿಸಿದ ದೇವತೆ: ಈ ದೇಗುಲದ ಕುರಿತು ವಿವರ ನೀಡಿದ ಅರ್ಚಕ ಮಹೇಶ್ ಕುಮಾರ್ ವ್ಯಾಸ್, ಭೀಕರ ಕ್ಷಾಮದಿಂದ ಬಳಲುತ್ತಿದ್ದ ತನ್ನ ಭಕ್ತರನ್ನು ನೋಡಿದ ದೇವಿಯ ಕಣ್ಣಲ್ಲಿ ನೀರು ಹರಿಯಲು ಆರಂಭಿಸಿತು. ಇದರಿಂದಾಗಿ ಸಸ್ಯಗಳು ಬೆಳೆಯಲಾರಂಭಿಸಿದವು. ಅವು ಉತ್ತಮ ಫಸಲು ನೀಡಿ, ಕ್ಷಾಮ ನೀಗಿತು. ಭಕ್ತರು ಇದರಿಂದಲೇ ಹೊಸ ಜೀವನ ಕಟ್ಟಿಕೊಂಡರು. ಇದಕ್ಕಾಗಿ ಈ ದೇವಿಯನ್ನು ಶಾಕಾಂಬರಿ ಎಂಬ ಹೆಸರಿನಿಂದ ಪೂಜಿಸಲಾಗುವುದು. ಆಕೆಯ ನೂರು ಕಣ್ಣುಗಳಿಂದ ನಿರಂತರವಾಗಿ ಕಣ್ಣೀರು ಹರಿಯುವುದರಿಂದ, ಮಾತೃ ದೇವಿಯ ಹೆಸರುಗಳಲ್ಲಿ ಒಂದು ಶತಾಕ್ಷಿ ಎಂದು ಕರೆಯಲಾಗುವುದು.

Leave a Reply

Your email address will not be published. Required fields are marked *

error: Content is protected !!