ಉದಯವಾಹಿನಿ, ಬುಲ್ದಾನಾ(ಮಹಾರಾಷ್ಟ್ರ): ಇಂಧನ ಅಭಾವ ವದಂತಿ ಹಿನ್ನೆಲೆ ಜಿಲ್ಲಾದ್ಯಂತ ಪೆಟ್ರೋಲ್ ಬಂಕ್​​ಗಳಿಗೆ ಜನರು ಮುಗಿಬಿದ್ದಿದ್ದಾರೆ. ಇದರ ನಡುವೆ ಚಿಖ್ಲಿಯ ಪೆಟ್ರೋಲ್ ಬಂಕ್​ಗೆ ಗ್ರಾಹಕನೊಬ್ಬ ವಾಹನದಲ್ಲಿ 200 ಲೀಟರ್ ಸಾಮರ್ಥ್ಯದ ಪ್ಲಾಸ್ಟಿಕ್ ಟ್ಯಾಂಕ್ ತಂದು ಸಿಬ್ಬಂದಿ ಮತ್ತು ನೆರೆದಿದ್ದವರ ಹುಬ್ಬೇರುವಂತೆ ಮಾಡಿದ್ದಾನೆ. ಒಂದು ಕಡೆ ಇಂಧನ​ ಕೊಳ್ಳಲು ಜನ ಪ್ಲಾಸ್ಟಿಕ್ ಕ್ಯಾನ್​ಗಳನ್ನು ಹಿಡಿದು ಸರತಿ ಸಾಲಿನಲ್ಲಿ ನಿಂತಿದ್ದರೆ, ಮತ್ತೊಂದೆಡೆ ಬಂಕ್​ ಸಿಬ್ಬಂದಿ 200 ಲೀಟರ್ ವಾಟರ್​ ಟ್ಯಾಂಕ್​​ಗೆ ಡೀಸೆಲ್​ ತುಂಬಿಸಿದ್ದಾರೆ.

ಈ ರೀತಿ ಇಂಧನ ಖರೀದಿಸುವವರ ಮತ್ತು ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಜಿಲ್ಲಾ ಸರಬರಾಜು ಅಧಿಕಾರಿ ರೂಪೇಶ್ ಬಿಜೇವರ್ ಎಚ್ಚರಿಕೆ ನೀಡಿದ್ದಾರೆ. ಪ್ಲಾಸ್ಟಿಕ್ ಕ್ಯಾನ್​ಗಳು, ಬ್ಯಾರೆಲ್‌ಗಳು ಮತ್ತು ದೊಡ್ಡ ಟ್ಯಾಂಕ್‌ಗಳೊಂದಿಗೆ ಗ್ರಾಹಕರು ಸರತಿ ಸಾಲಿನಲ್ಲಿ ನಿಲ್ಲುತ್ತಿರುವ ದೃಶ್ಯ ಇದೀಗ ಬಹುತೇಕ ಪೆಟ್ರೋಲ್​ ಬಂಕ್​​ಗಳಲ್ಲಿ ಕಂಡು ಬರುವ ಸಾಮಾನ್ಯ ಸ್ಥಿತಿಯಾಗಿದೆ. ಹೀಗಾಗಿ ಜಿಲ್ಲಾಧಿಕಾರಿ ಈ ರೀತಿ ಇಂಧನ ಮಾರಾಟ ಮತ್ತು ಖರೀದಿ ಮಾಡುವವರ ಕ್ರಮ ಕೈಗೊಳ್ಳುವ ಸಂಬಂಧ ಸುತ್ತೋಲೆ ಹೊರಡಿಸಿದ್ದಾರೆ.
ಇಂಧನ ಕೊರತೆಯ ವದಂತಿಯಿಂದ ವಾಹನಗಳು ಪೆಟ್ರೋಲ್ ಬಂಕ್​ ಮುಂದೆ ಎರಡು ಕಿಲೋಮೀಟರ್‌ಗಳವರೆಗೆ ಸಾಲುಗಟ್ಟಿ ನಿಲ್ಲುತ್ತಿವೆ. ಹಲವಾರು ಬಂಕ್​ಗಳಲ್ಲಿ ಇಂಧನ ಖಾಲಿಯಾಗಿದೆ ಎಂಬ ವರದಿಗಳು ಬರುತ್ತಿವೆ. ಪರಿಣಾಮವಾಗಿ, ಜನಸಾಮಾನ್ಯರು ಅನಾನುಕೂಲತೆ ಎದುರಿಸುತ್ತಿದ್ದಾರೆ.

ಮತ್ತೊಂದೆಡೆ, ಬುಲ್ಡಾನಾ ಜಿಲ್ಲಾಧಿಕಾರಿ ಡಾ. ಕಿರಣ್ ಪಾಟೀಲ್ ಇಂಧನ ದಾಸ್ತಾನು ಮೇಲೆ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಿದ್ದಾರೆ. ಅನಗತ್ಯ ಇಂಧನ ಸಂಗ್ರಹಣೆಯನ್ನು ತಡೆಯಲು ಮತ್ತು ಕೃತಕ ಅಭಾವ ತಡೆಯಲು ನಿರ್ದೇಶನಗಳನ್ನು ನೀಡಿದ್ದಾರೆ. ಆದಾಗ್ಯೂ, ಅನೇಕ ಪೆಟ್ರೋಲ್​ ಬಂಕ್​​ ನಿರ್ವಾಹಕರು ಈ ಆದೇಶವನ್ನು ಉಲ್ಲಂಘಿಸುತ್ತಿದ್ದಾರೆ. ಕೆಲವು ಪೆಟ್ರೋಲ್​​ ಬಂಕ್​​ಗಳು ಇಂಧನವನ್ನು ಭಾರಿ ಪ್ರಮಾಣದಲ್ಲಿ ಮಾರಾಟ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ವದಂತಿಗಳಿಂದ ಖರೀದಿಯು ಇಂಧನ ಪೂರೈಕೆಯನ್ನು ಅಡ್ಡಿಪಡಿಸಬಹುದು ಎಂಬ ಕಳವಳ ವ್ಯಕ್ತವಾಗುತ್ತಿದೆ. ಜಿಲ್ಲಾಧಿಕಾರಿಗಳು ನಾಗರಿಕರು ವದಂತಿಗಳನ್ನು ನಂಬದಂತೆ ಮತ್ತು ಸಂಪೂರ್ಣವಾಗಿ ಅಗತ್ಯವಿರುವ ಮಟ್ಟಿಗೆ ಮಾತ್ರ ತಮ್ಮ ವಾಹನಗಳಿಗೆ ಇಂಧನ ತುಂಬಿಸಿಕೊಳ್ಳಲು ಮನವಿ ಮಾಡಿದ್ದಾರೆ. ಆಡಳಿತವು ಸುಗಮ ಇಂಧನ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಗಳನ್ನು ಪ್ರಾರಂಭಿಸಿದ್ದರೂ, ಬಂಕ್​​ ನಿರ್ವಾಹಕರು ನಿಯಮಗಳನ್ನು ಪಾಲಿಸಲು ವಿಫಲರಾಗುತ್ತಿರುವುದರಿಂದ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವೂ ಕೇಳಿಬರುತ್ತಿದೆ.

ಮತ್ತೊಂದೆಡೆ, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ದೇಶದಲ್ಲಿ ಇಂಧನ ಬೆಲೆ ಏರಿಕೆಯ ಬಗ್ಗೆ ಹೆಚ್ಚುತ್ತಿರುವ ಕಳವಳಗಳ ಮಧ್ಯೆ, ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಎರಡರ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು 10 ರೂಪಾಯಿ ಇಳಿಸಿದೆ. ಗುರುವಾರ ತಡರಾತ್ರಿ ಹೊರಡಿಸಲಾದ ಗೆಜೆಟ್ ಅಧಿಸೂಚನೆಯ ಪ್ರಕಾರ, ಪೆಟ್ರೋಲ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಲೀಟರ್‌ಗೆ 13 ರೂ.ನಿಂದ 3 ರೂ.ಗೆ ಇಳಿಸಲಾಗಿದೆ. ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 10 ರೂ.ನಿಂದ 0 ರೂ.ಗೆ ಇಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!