ಉದಯವಾಹಿನಿ, ಹರಿದ್ವಾರ: ಸುಪ್ರೀಂಕೋರ್ಟ್ ದಯಾಮರಣ ನೀಡಿದ ನಂತರ 13 ವರ್ಷಗಳಿಂದ ಸಾವು–ಬದುಕಿನ ಮಧ್ಯೆ ಹೋರಾಟ ನಡೆಸಿದ್ದ 31 ವರ್ಷದ ಹರೀಶ್ ರಾಣಾ ಮಾರ್ಚ್ 24 ರಂದು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇದೀಗ ಅವರ ಚಿತಾಭಸ್ಮವನ್ನು ಹರಿದ್ವಾರದ ಪವಿತ್ರ ನೀರಿನಲ್ಲಿ ವಿಸರ್ಜಿಸಲಾಗಿದೆ. ಜೊತೆಗೆ ಅವರ ಪುಣ್ಯಸ್ಮರಣೆ ಸೇರಿದಂತೆ ಎಲ್ಲ ಕಾರ್ಯಕ್ರಮಗಳನ್ನು ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿರುವ ಅವರ ಪೂರ್ವಜರ ಗ್ರಾಮ ಪಲೆಟಾದಲ್ಲಿ ನಡೆಸಲು ಕುಟುಬಂಸ್ಥರು ಮುಂದಾಗಿದ್ದಾರೆ.
ಹರೀಶ್ ರಾಣಾ ಕಳೆದ 13 ವರ್ಷಗಳಿಂದ ಕೋಮಾದಲ್ಲಿದ್ದರು. ಸುಪ್ರೀಂ ಕೋರ್ಟ್ ದಯಾಮರಣದ ನಂತರ ಮುಕ್ತಿ ಪಡೆದಿದ್ದು, ಮಾರ್ಚ್ 25 ರಂದು ದೆಹಲಿಯ ಗ್ರೀನ್ ಪಾರ್ಕ್‌ನ ಸ್ಮಶಾನದಲ್ಲಿ ಶಾಶ್ವತ ವಿಶ್ರಾಂತಿಗೆ ತೆರಳಿದರು. ಮಾರ್ಚ್ 26 ರಂದು, ಅವರ ತಂದೆ ಅಶೋಕ್ ರಾಣಾ ಮತ್ತು ಅವರ ಸಹೋದರ ಆಶಿಶ್ ರಾಣಾ ಸೇರಿದಂತೆ ಕುಟುಂಬ ಸದಸ್ಯರು, ಹರೀಶ್ ಚಿತಾಭಸ್ಮವನ್ನು ಹರಿದ್ವಾರದಲ್ಲಿ ವಿಸರ್ಜಿಸಿದರು. ನಂತರ, ಕುಟುಂಬವು ಹರಿದ್ವಾರದಿಂದ ತಮ್ಮ ಪೂರ್ವಜರ ಗ್ರಾಮಕ್ಕೆ ತೆರಳಿದೆ.
ಎಲ್ಲರಿಗೂ ಕೃತಜ್ಞತೆ: ತಮ್ಮ ಮಗನಿಗೆ ಮುಕ್ತಿ ನೀಡಲು ಸಹಕರಿಸಿದ ಎಲ್ಲರಿಗೂ ಅಶೋಕ್ ರಾಣಾ ಕೃತಜ್ಞತೆ ಸಲ್ಲಿಸಿದರು. “ನಮ್ಮೊಂದಿಗೆ ನಿಂತು ನಮ್ಮ ಹೋರಾಟದ ಉದ್ದಕ್ಕೂ ಬೆಂಬಲ ನೀಡಿದ ಎಲ್ಲರಿಗೂ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ. ಸುಪ್ರೀಂ ಕೋರ್ಟ್, ಅಧಿಕಾರಿಗಳು, ಕಾನೂನು ಸಲಹೆಗಾರರು ಮತ್ತು ಏಮ್ಸ್‌ನ ವೈದ್ಯರಿಗೆ ನಾವು ಆಭಾರಿಯಾಗಿದ್ದೇವೆ. ಈ ಕಷ್ಟದ ಅವಧಿಯಲ್ಲಿ ನಮ್ಮೊಂದಿಗೆ ನಿಂತ ಎಲ್ಲರಿಗೂ ನಾವು ಕೃತಜ್ಞರಾಗಿರುತ್ತೇವೆ. ನಮ್ಮ ಅನುಪಸ್ಥಿತಿಯಲ್ಲಿ ನಮ್ಮ ಮನೆಗೆ ಭೇಟಿ ನೀಡಿದ ಅತಿಥಿಗಳನ್ನು ನೋಡಿಕೊಂಡು ಸಹಕರಿಸಿದ ನೆರೆಹೊರೆಯವರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇವೆ” ಎಂದು ಅಶೋಕ್ ರಾಣಾ ತಿಳಿಸಿದ್ದಾರೆ.
“ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಅವರು ನಮ್ಮ ಮನೆಗೆ ಅಧಿಕಾರಿಗಳನ್ನು ಕಳುಹಿಸಿ ನಮ್ಮ ಯೋಗಕ್ಷೇಮ ವಿಚಾರಿಸುವ ಜೊತೆಗೆ ನಿರಂತರವಾಗಿ ಆರ್ಥಿಕ ನೆರವು ನೀಡುತ್ತಿದ್ದರು” ಎಂದು ಅಶೋಕ್ ರಾಣಾ ನೆನೆದಿದ್ದಾರೆ.
ಪಂಜಾಬ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿ ಹರೀಶ್ ರಾಣಾ 2013 ರಲ್ಲಿ ತಮ್ಮ ಪಿಜಿ ವಸತಿಗೃಹದ ನಾಲ್ಕನೇ ಮಹಡಿಯಿಂದ ಬಿದ್ದು ತಲೆಗೆ ಗಾಯ ಮಾಡಿಕೊಂಡಿದ್ದರು. ಅಂದಿನಿಂದ, ಅವರು ಸಂಪೂರ್ಣವಾಗಿ ಹಾಸಿಗೆ ಹಿಡಿದು, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದರು. ಬಳಿಕ 2024 ರಲ್ಲಿ ಹರೀಶ್ ದಯಾಮರಣಕ್ಕೆ ಅನುಮತಿ ಕೋರಿ ಅವರ ತಂದೆ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ, ಹೈಕೋರ್ಟ್ ಈ ಅರ್ಜಿಯನ್ನು ವಜಾಗೊಳಸಿತ್ತು. ಬಳಿಕ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆಗಸ್ಟ್ 2024 ರಲ್ಲಿ, ಸುಪ್ರೀಂ ಕೋರ್ಟ್ ಅರ್ಜಿಯ ವಿಚಾರಣೆಗೆ ನಿರಾಕರಿಸಿತು. ಆದರೆ, ಅವರ ವೈದ್ಯಕೀಯ ಚಿಕಿತ್ಸೆಯ ವೆಚ್ಚವನ್ನು ಭರಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
