ಉದಯವಾಹಿನಿ, ಭುವನಗಿರಿ (ಆಂಧ್ರ ಪ್ರದೇಶ): ನಾಲ್ಕು ವರ್ಷದ ಮಗುವಿನ ಮೇಲೆ ಬೀದಿ ನಾಯಿಗಳು ಭೀಕರವಾಗಿ ದಾಳಿ ಮಾಡಿದ್ದು, ಪರಿಣಾಮ ಮಗುವು ತನ್ನ ಕಣ್ಣು ಗುಡ್ಡೆಯನ್ನೆ ಕಳೆದುಕೊಂಡಿರುವ ದಾರುಣ ಘಟನೆ ಗುರುವಾರ ಆಂಧ್ರಪ್ರದೇಶ ಭುವನಗಿರಿಯ ತಾರಕ ರಾಮ್ ನಗರದಲ್ಲಿ ವರದಿಯಾಗಿದೆ. ಇದು ನಗರದಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿಯ ಗಂಭೀರತೆಯ ಕಳವಳವನ್ನು ಹುಟ್ಟು ಹಾಕಿದೆ.
ಶ್ರಾವಣಿ ಮತ್ತು ಸಂದೇಲ ರಾಹುಲ್ ಕುಮಾರ್ ಅವರ ಮಗ ಪ್ರಿಯಾಂಶು ಕಣ್ಣು ಕಳೆದುಕೊಂಡ ಬಾಲಕ. ಬಾಲಕ ಮನೆಯ ಹೊರಗೆ ಆಟ ಆಡುವಾಗ ಆತನ ಮೇಲೆ ಎರಡು ಬೀದಿ ನಾಯಿಗಳು ದಾಳಿ ಮಾಡಿದೆ. ತಕ್ಷಣಕ್ಕೆ ಯಾರಾದರೂ ಸಹಾಯಕ್ಕೆ ಆಗಮಿಸುವ ಮುನ್ನವೇ ಶ್ವಾನ ತೀವ್ರವಾಗಿ ದಾಳಿ ಮಾಡಿದ್ದು, ಅದರ ದಾಳಿಯ ಭೀಕರತೆ ಮಗುವಿನ ಕಣ್ಣಿನ ಗುಡ್ಡೆ ಹೊರ ಬಂದಿದೆ. ಮಗುವು ಜೋರಾಗಿ ಕಿರುಚಿಕೊಳ್ಳಲಾರಂಭಸಿದಾಗ ಕುಟುಂಬ ಸದಸ್ಯರು ಮತ್ತು ಅಕ್ಕಪಕ್ಕದ ನಿವಾಸಿಗಳು ಹೊರ ಬಂದಿದ್ದು, ಮಗುವನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮೈಜುಮ್ಮು ಎನ್ನಿಸಿದ ದೃಶ್ಯ: ಘಟನೆಯ ಕುರಿತು ವರದಿ ನೀಡಿದ ಪ್ರತ್ಯಕ್ಷದರ್ಶಿಗಳು, ಮಗುವ ದಾಳಿಯಿಂದ ರಕ್ತದ ಮಡುವಿನಲ್ಲಿತ್ತು. ಅದರ ಕಣ್ಣಿನ ಗುಡ್ಡೆ ನೆಲದ ಮೇಲೆ ಬಿದ್ದಿತ್ತು. ಈ ಆತಂಕದ ಸ್ಥಿತಿಯಲ್ಲಿ ನಾಯಿಯನ್ನು ಓಡಿಸಲಾಯಿತು. ಮಗುವನ್ನು ತಕ್ಷಣಕ್ಕೆ ಭುವನಗಿರಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಪ್ರಥಮ ಚಿಕಿತ್ಸೆಯ ಬಳಿಕ ಮಗುವನ್ನು ಹೆಚ್ಚಿನ ಚಿಕಿತ್ಸೆಗೆ ಹೈದರಾಬಾದ್ಗೆ ಕರೆದೊಯ್ಯುವಂತೆ ಶಿಫಾರಸು ಮಾಡಿದರು.
ಈ ಆತಂಕಕಾರಿ ಘಟನೆ ಭಯದಲ್ಲಿರುವಾಗಲೇ ಅದೇ ದಿನ ಮತ್ತೊಂದು ಬೀದಿನಾಯಿ ಹಾವಳಿ ಘಟನೆ ನಡೆದಿದೆ. ಆರ್ಬಿನಗರ ಕಾಲೋನಿಯಲ್ಲಿ 10 ವರ್ಷದ ಬಾಲಕನ ಮೇಲೆ ಬೀದಿ ನಾಯಿ ದಾಳಿ ಮಾಡಿದೆ. ನಗರದಲ್ಲಿ ಬೀದಿನಾಯಿಗಳ ದಾಳಿಗಳು ಹೆಚ್ಚಾಗಿ ನಡೆಯುತ್ತಿದ್ದು, ವಸತಿ ಪ್ರದೇಶಗಳು, ವಿಶೇಷವಾಗಿ ಮಕ್ಕಳಿಗೆ, ಆತಂಕದ ವಲಯಗಳಾಗಿ ಬದಲಾಗುತ್ತಿವೆ ಎಂದು ನಿವಾಸಿಗಳು ದೂರಿದ್ದಾರೆ.
ಈ ಘಟನೆ ಬೆನ್ನಲ್ಲೇ ಸ್ಥಳೀಯರು ನಗರಸಭೆ ಅಧಿಕಾರಿಗಳು ತಕ್ಷಣಕ್ಕೆ ಕ್ರಮಕ್ಕೆ ಆಗ್ರಹಿಸಿದ್ದಾರೆ. ಬೀದಿ ನಾಯಿಗಳ ಸಂಖ್ಯೆಯನ್ನು ನಿಯಂತ್ರಿಸಲು ಕಠಿಣ ಕ್ರಮ ನಡೆಸಬೇಕು. ಇನ್ನೆಷ್ಟು ಈ ರೀತಿಯ ಘಟನೆಗಳು ಆಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆಯು ನಗರಸಭೆಯ ನಿರ್ಲಕ್ಷ್ಯ, ಅಮಾಯಕರ ಜೀವ ಹಾನಿಯ ಅಪಾಯವನ್ನು ಹೆಚ್ಚಿಸಿದೆ. ಈ ದುರಂತ ಘಟನೆಯು ಬೀದಿನಾಯಿಗಳ ನಿಯಂತ್ರಣ ಕ್ರಮಗಳ ತುರ್ತು ಅಗತ್ಯವನ್ನು ಮತ್ತೊಮ್ಮೆ ಒತ್ತಿ ಹೇಳಿದೆ.
