ಉದಯವಾಹಿನಿ, ಕಠ್ಮಂಡು(ನೇಪಾಳ): ರ‍್ಯಾಪರ್​​ನಿಂದ ರಾಜಕಾರಣಿಯಾಗಿ ಬದಲಾದ ಬಾಲೇಂದ್ರ ಶಾ (ಬಾಲೆನ್) ಶುಕ್ರವಾರ ನೇಪಾಳದ ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಜೆನ್​ ಝಡ್ ಪ್ರತಿಭಟನೆಯಿಂದ ಕೆ.ಪಿ.ಶರ್ಮಾ ಓಲಿ ನೇತೃತ್ವದ ಸರ್ಕಾರ ಪದಚ್ಯುತಗೊಂಡ ಸುಮಾರು ಆರು ತಿಂಗಳ ನಂತರ, ಸಂವಿಧಾನದ 76 (1)ನೇ ವಿಧಿಯನ್ವಯ ಬಾಲೇಂದ್ರ ಶಾ ಅವರನ್ನು ಅಧ್ಯಕ್ಷ ರಾಮ್ ಚಂದ್ರ ಪೌಡೆಲ್ ಅವರು 47ನೇ ಪ್ರಧಾನಿಯಾಗಿ ನೇಮಿಸಿದರು.
35 ವರ್ಷಕ್ಕೆ ಪ್ರಧಾನಿ ಪಟ್ಟ! ನೇಪಾಳ ರಾಜಕೀಯದಲ್ಲಿ ಬಾಲೆನ್ ದಾಖಲೆ: ರಾಷ್ಟ್ರೀಯ ಸ್ವತಂತ್ರ ಪಕ್ಷದ (ಆರ್‌ಎಸ್‌ಪಿ) ನಾಯಕಿ ಶೀತಲ್ ನಿವಾಸ್‌ನಲ್ಲಿರುವ ಅಧ್ಯಕ್ಷರ ಕಚೇರಿಯಲ್ಲಿ ಮಧ್ಯಾಹ್ನ 12.34ಕ್ಕೆ 35 ವರ್ಷದ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕರಿಸಿದರು. ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಶಿಕ್ಷಣ ಪಡೆದಿರುವ ಬಾಲೆನ್, ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ದೇಶದ ಅತ್ಯಂತ ಕಿರಿಯ ವ್ಯಕ್ತಿ ಮತ್ತು ಮಾಧೇಶ್ ಪ್ರದೇಶದಿಂದ ಉನ್ನತ ಹುದ್ದೆ ಅಲಂಕರಿಸಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಜೆನ್​ ಝಡ್ ಕಿಚ್ಚಿಗೆ ಉರುಳಿತ್ತು ಓಲಿ ಸರ್ಕಾರ: ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಸಾಮಾಜಿಕ ಮಾಧ್ಯಮ ನಿಷೇಧದ ವಿರುದ್ಧ ಯುವ ಜನತೆ ನೇತೃತ್ವದ ಜೆನ್​ ಝಡ್ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ನಂತರ, ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮಾಜಿ ಪ್ರಧಾನಿ ಕೆ.ಪಿ.ಶರ್ಮಾ ಓಲಿ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಪದಚ್ಯುತಿಗೊಂಡಿತು. ಇದರ ನಂತರ ಬಾಲೇಂದ್ರ ಶಾ ಅವರು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಮೊದಲ ಪ್ರಧಾನಿಯಾಗಿದ್ದಾರೆ.

ಬಾಲೆನ್ ಅವರ ಪ್ರಮಾಣವಚನ ಸಮಾರಂಭದಲ್ಲಿ ಹಿಂದೂ ಮತ್ತು ಬೌದ್ಧ ಧಾರ್ಮಿಕ ಸಂಪ್ರದಾಯಗಳ ವಿಶಿಷ್ಟ ಮಿಶ್ರಣ ಗಮನ ಸೆಳೆಯಿತು. ಇದು ಏಳು ಬ್ರಾಹ್ಮಣರಿಂದ ಶಂಖನಾದ, 108 ಹಿಂದೂ ಪಟುಗಳು ಅಥವಾ ಯುವ ಬ್ರಾಹ್ಮಣರಿಂದ ವೈದಿಕ ಸ್ತೋತ್ರಗಳು ಅಥವಾ ಸ್ವಸ್ತಿ ಪಠಣ ಮತ್ತು 107 ಲಾಮಾಗಳಿಂದ ಮಂಗಲ್ ವಚನ್ ಅಥವಾ ಬೌದ್ಧ ಧರ್ಮಗ್ರಂಥದ ಪಠಣ ಸೇರಿದಂತೆ ವಿಸ್ತಾರವಾದ ಧಾರ್ಮಿಕ ಆಚರಣೆಗಳು ಸಮಾರಂಭದಲ್ಲಿ ನಡೆದವು.

ಬಾಲೆನ್ 15ರಿಂದ 18 ಮಂದಿ ಮಂತ್ರಿಗಳೊಂದಿಗೆ ಸಂಪುಟ ರಚಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಮಾರ್ಚ್ 5ರಂದು ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ, ಮಾಜಿ ಕಠ್ಮಂಡು ಮೇಯರ್, ನೇಪಾಳ ಕಮ್ಯುನಿಸ್ಟ್ ಪಕ್ಷದ (ಯುನೈಟೆಡ್ ಮಾರ್ಕ್ಸಿಸ್ಟ್-ಲೆನಿನಿಸ್ಟ್) ದೀರ್ಘಕಾಲೀನ ಭದ್ರಕೋಟೆಯಾದ ಝಾಪಾ-5 ಕ್ಷೇತ್ರದಲ್ಲಿ ನಾಲ್ಕು ಬಾರಿ ಪ್ರಧಾನಿಯಾಗಿದ್ದ ಶರ್ಮಾ ಓಲಿ ಅವರನ್ನು ಭಾರಿ ಅಂತರದಿಂದ ಸೋಲಿಸಲಾಯಿತು.

ಮಾರ್ಚ್ 5ರಂದು ನಡೆದ ಚುನಾವಣೆಯಲ್ಲಿ ಆರ್‌ಎಸ್‌ಪಿ ಭರ್ಜರಿ ಜಯ ಸಾಧಿಸಿತು. ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ (ಎಚ್‌ಒಆರ್)ನ ಒಟ್ಟು 275 ಸ್ಥಾನಗಳಲ್ಲಿ 182 ಸ್ಥಾನಗಳನ್ನು ಗಳಿಸಿ, ಬಹುಮತದ ಸರ್ಕಾರ ರಚಿಸಲು ಅರ್ಹತೆ ಪಡೆಯಿತು. ಎಚ್‌ಒಆರ್‌ನ 275 ಸದಸ್ಯರಲ್ಲಿ 165 ಜನರನ್ನು ನೇರ ಮತದಾನದ ಮೂಲಕ ಮತ್ತು 110 ಜನರನ್ನು ಅನುಪಾತದ ಮತದಾನದ ಮೂಲಕ ಆಯ್ಕೆ ಮಾಡಲಾಗುತ್ತದೆ.

Leave a Reply

Your email address will not be published. Required fields are marked *

error: Content is protected !!