ಉದಯವಾಹಿನಿ,  ಯುಎಸ್ , ಇಸ್ರೇಲ್ ಮತ್ತು ಇರಾನ್ ಸಂಘರ್ಷದ ಮಧ್ಯೆ ಇದೀಗ ಜಾಗತಿಕ ಮಟ್ಟದಲ್ಲಿ ತೈಲ ದರಗಳು ಹೆಚ್ಚಾಗಿವೆ. ಇದರ ಪರಿಣಾಮ ಭಾರತ ಈಗ ಪರ್ಯಾಯ ಇಂಧನದತ್ತ ಎದುರು ನೋಡುತ್ತಿದೆ. ಈ ನಡುವೆ ರಷ್ಯಾದಿಂದ ಎಲ್‌ಎನ್‌ಜಿ ಖರೀದಿಗೆ ಮಾತುಕತೆ ಪ್ರಾರಂಭಿಸಿದೆ. ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಪ್ರಾರಂಭವಾದ ಬಳಿಕ ರಷ್ಯಾದಿಂದ ತೈಲ ಖರೀದಿಗೆ ಅಮೆರಿಕ ನಿರ್ಬಂಧ ಹೇರುವ ಪ್ರಯತ್ನ ಮಾಡಿತ್ತು. ಆದರೆ ಇದೀಗ ರಷ್ಯಾ ತೈಲಕ್ಕೆ ಹೆಚ್ಚಿನ ಬೇಡಿಕೆ ಉಂಟಾಗಿದೆ.
ಇರಾನ್ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಯುದ್ಧ ಘೋಷಿಸಿದ ಬಳಿಕ ಭಾರತವು ಎಲ್‌ಎನ್‌ಜಿ ಖರೀದಿ ಮಾಡಲು ರಷ್ಯಾದೊಂದಿಗೆ ಮಾತುಕತೆ ಪ್ರಾರಂಭಿಸಿದೆ. ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ನಡೆಸಿದ ಬಳಿಕ ಇಂಧನ ಬೆಲೆಗಳು ಗಗನಕ್ಕೇರಿದ್ದು, ಇದರಿಂದ ಭಾರತ ರಷ್ಯಾದಿಂದ ಎಲ್‌ಎನ್‌ಜಿ ಖರೀದಿಗೆ ಮುಂದಾಗಿದೆ.

ಇರಾನ್ ಮೇಲೆ ಯುಎಸ್ ಮತ್ತು ಇಸ್ರೇಲ್ ಸೇನಾ ಪಡೆಯು ದಾಳಿ ನಡೆಸಿದ ಬಳಿಕ ಇದಕ್ಕೆ ಪ್ರತಿಯಾಗಿ ಇರಾನ್ ಜಾಗತಿಕ ವ್ಯಾಪಾರದ ಪ್ರಮುಖ ದಾರಿಯಾದ ಹೊರ್ಮುಜ್ ಜಲಸಂಧಿಯನ್ನು ಮುಚ್ಚಿ ಸರಕು ಸಾಗಾಟಕ್ಕೆ ಅಡ್ಡಿ ಉಂಟು ಮಾಡಿತ್ತು. ಇದು ಜಾಗತಿಕ ಮಟ್ಟದಲ್ಲಿ ತೈಲ ಬಿಕ್ಕಟ್ಟು ಉಂಟು ಮಾಡಿದೆ. ಇದರಿಂದ ತೈಲ ಬೆಲೆ ಗಗನಕ್ಕೇರಿದೆ.

ಉಕ್ರೇನ್ ಮೇಲೆ ರಷ್ಯಾ ಯುದ್ಧ ಘೋಷಿಸಿದ ಬಳಿಕ ಭಾರತ ಮತ್ತು ರಷ್ಯಾ ನಡುವೆ ಇದೇ ಮೊದಲ ಬಾರಿಗೆ ನೇರವಾಗಿ ದ್ರವೀಕೃತ ನೈಸರ್ಗಿಕ ಅನಿಲ (ಎಲ್‌ಎನ್‌ಜಿ) ಮಾರಾಟವನ್ನು ಪುನರಾರಂಭಿಸಲು ಸಿದ್ದತೆಗಳನ್ನು ನಡೆಸಲಾಗುತ್ತಿದೆ ಎನ್ನಲಾಗಿದೆ.

ದೆಹಲಿಯಲ್ಲಿ ಮಾರ್ಚ್ 19ರಂದು ರಷ್ಯಾದ ಉಪ ಇಂಧನ ಸಚಿವ ಪಾವೆಲ್ ಸೊರೊಕಿನ್ ಮತ್ತು ಭಾರತದ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ನಡುವೆ ಎಲ್‌ಎನ್‌ಜಿ ವ್ಯಾಪಾರದ ಕುರಿತಾಗಿ ಮಾತುಕತೆಗಳನ್ನು ನಡೆಸಲಾಗಿದ್ದು, ಮೌಖಿಕ ಒಪ್ಪಂದವನ್ನು ಮಾಡಲಾಗಿದೆ. ಈ ಒಪ್ಪಂದದಿಂದ ಭಾರತವು ಪಾಶ್ಚಿಮಾತ್ಯ ನಿರ್ಬಂಧಗಳನ್ನು ಉಲ್ಲಂಘಿಸುವ ಅಪಾಯವಿದ್ದರೂ ಕೂಡ ಕೆಲವು ವಾರಗಳಲ್ಲಿ ಮಾತುಕತೆ ಪೂರ್ಣಗೊಳ್ಳಬಹುದು ಎನ್ನಲಾಗುತ್ತಿದೆ.ಕಳೆದ ಜನವರಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿಬಂಧನೆಗಳಿಂದಾಗಿ ಭಾರತವು ರಷ್ಯಾದಿಂದ ಕಚ್ಚಾ ತೈಲ ಖರೀದಿಯನ್ನು ಕಡಿಮೆ ಮಾಡಿತ್ತು. ಆದರೆ ಇದೀಗ ಮತ್ತೆ ದೆಹಲಿ ಮತ್ತು ಮಾಸ್ಕೋ ನಡುವೆ ವ್ಯಾಪಾರ ವಹಿವಾಟು ಪುನರ್ ಆರಂಭವಾಗುವ ನಿರೀಕ್ಷೆ ಇದೆ. ಎರಡೂ ರಾಷ್ಟ್ರಗಳು ಕಚ್ಚಾ ತೈಲ ಪೂರೈಕೆಗೆ ಒಪ್ಪಿಕೊಂಡರೆ ತಿಂಗಳೊಳಗೆ ಭಾರತದ ಒಟ್ಟು ಆಮದು ಕನಿಷ್ಠ ಶೇ. 40ಕ್ಕೆ ಹೆಚ್ಚಾಗಲಿದೆ.

Leave a Reply

Your email address will not be published. Required fields are marked *

error: Content is protected !!