ಉದಯವಾಹಿನಿ, ಮಂಗಳೂರು: ಹೊಸ ಬಾವಿ ಕೊರೆಯುವಾಗ 30 ಅಡಿ ಎತ್ತರದಿಂದ ಮಣ್ಣು ತುಂಬಿದ ಕಬ್ಬಿಣದ ಬಕೆಟ್ ಕ್ರೇನ್ ಕೊಕ್ಕೆಯಿಂದ ಬೇರ್ಪಟ್ಟು ತಲೆ ಮೇಲೆ ಬಿದ್ದ ಪರಿಣಾಮ ಕಾರ್ಮಿಕ ಮೃತಪಟ್ಟಿರುವ ಘಟನೆ ಮಂಗಳೂರಿನ ಉಳ್ಳಾಲ ತಾಲೂಕಿನ ಕುತ್ತಾರು ಪದವಿನ ಸಲಾತ್ ನಗರದಲ್ಲಿ ನಡೆದಿದೆ. ಶಿವಮೊಗ್ಗ ಮೂಲದ ವಲಸೆ ಕಾರ್ಮಿಕ ಶಿವಕುಮಾರ್ ಜಿ.ಕೆ (30) ಮೃತ ದುರ್ದೈವಿ. ಬಾವಿಯ ಒಳಗಡೆ ಶಿವಕುಮಾರ್ ಸೇರಿ ಮೂವರು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಕ್ರೇನ್ ಮೂಲಕ ಮಣ್ಣು ಮೇಲೆತ್ತುತ್ತಿದ್ದಾಗ ತಾಂತ್ರಿಕ ದೋಷದಿಂದ ಬಕೆಟ್ ಕಳಚಿ ಶಿವಕುಮಾರ್ ತಲೆ ಮೇಲೆ ಬಿದ್ದಿದೆ. ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲೇ ಶಿವಕುಮಾರ್ ಕೊನೆಯುಸಿರೆಳೆದಿದ್ದಾರೆ.
ಶಿವಮೊಗ್ಗದ ಸೊರಬ ತಾಲೂಕಿನ ಮಲ್ಲಾಪುರ ನಿವಾಸಿಯಾಗಿದ್ದ ಶಿವಕುಮಾರ್ ಎರಡು ವಾರಗಳ ಹಿಂದಷ್ಟೇ ಕಿರಿಯ ಮಗಳ ಮೊದಲ ವರ್ಷದ ಹುಟ್ಟುಹಬ್ಬ ಆಚರಿಸಿದ್ದರು. ಶಿವಕುಮಾರ್ ಪತ್ನಿ ಮತ್ತು ಇಬ್ಬರು ಪುಟ್ಟ ಮಕ್ಕಳನ್ನು ಅಗಲಿದ್ದಾರೆ. ಘಟನೆ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
