ಉದಯವಾಹಿನಿ, ಕೋಲ್ಕತ್ತಾ: ಬಂಗಾಳ ವಿಧಾನಸಭಾ ಚುನಾವಣೆಗೆ ದಿನಗಳು ಹತ್ತಿರವಾಗುತ್ತಿರುವ ಹೊತ್ತಿನಲ್ಲೇ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಕೇಂದ್ರ ಗೃಹಸಚಿವ ಅಮಿತ್ ಶಾ ಚಾರ್ಜ್‌ಶೀಟ್ ಬಿಡುಗಡೆ ಮಾಡಿದ್ದಾರೆ. ತೃಣಮೂಲ ಕಾಂಗ್ರೆಸ್‌ನ 15 ವರ್ಷಗಳ ಆಡಳಿತದ ವಿರುದ್ಧದ ಚಾರ್ಜ್‌ಶೀಟ್ ಇದಾಗಿದೆ. ಬಳಿಕ ತಮ್ಮ ಭಾಷಣದಲ್ಲಿ ಮಮತಾ ಬ್ಯಾನರ್ಜಿ ಮತ್ತು ಸರ್ಕಾರದ ವಿರುದ್ಧ ಕಟು ಟೀಕೆ ಮಾಡಿದ್ದಾರೆ.
ಕೋಲ್ಕತ್ತಾದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅಮಿತ್ ಶಾ, ಇದು ಕೇವಲ ಟಿಎಂಸಿ ವಿರುದ್ಧದ ಚಾರ್ಜ್ ಶೀಟ್ ಅಲ್ಲ, ಇದು ಕೇವಲ ಬಿಜೆಪಿಯ ಚಾರ್ಜ್‌ಶೀಟ್ ಅಲ್ಲ. ಬದಲಾಗಿ ಬಿಜೆಪಿ ಧ್ವನಿ ನೀಡುತ್ತಿರುವ ಬಂಗಾಳದ ಜನರ ಜಾರ್ಜ್ ಶೀಟ್ ಎಂದು ಬಣ್ಣಿಸಿದ್ದಾರೆ.
ಬಂಗಾಳವು ಕಳೆದ 15 ವರ್ಷಗಳಿಂದ ಭಯ, ಭ್ರಷ್ಟಾಚಾರ ಮತ್ತು ತಾರತಮ್ಯದ ರಾಜಕೀಯದಿಂದ ತುಂಬಿಕೊಂಡಿದೆ. ಮುಂಬರುವ ಚುನಾವಣೆಗಳು ರಾಜ್ಯಕ್ಕೆ ಮಾತ್ರವಲ್ಲ, ದೇಶಕ್ಕೂ ನಿರ್ಣಾಯಕವಾಗಿದೆ, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ್ದಾಗಿದೆ. ದೇಶದ ಭದ್ರತೆ ಕಾಪಾಡಿಕೊಳ್ಳಲು ಮತ್ತು ಅಕ್ರಮ ವಲಸಿಗರನ್ನ ತೆಗೆದುಹಾಕಲು ಚುನಾವಣೆಯಲ್ಲಿ ಗೆಲ್ಲುವುದು ಅಗತ್ಯವಾಗಿದೆ. ಅದಕ್ಕಾಗಿ ಮುಂಬರುವ ಚುನಾವಣೆಯಲ್ಲಿ ʻಭಯʼ ಬೇಕಾ ಅಥವಾ ʻಭರವಸೆʼ ಬೇಕಾ ಎಂಬುದನ್ನು ಬಂಗಾಳದ ಜನ ನಿರ್ಧರಿಸಬೇಕು ಎಂದು ಶಾ ಕರೆ ನೀಡಿದ್ದಾರೆ.
